
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣದಲ್ಲಿ ಇಬ್ಬರು ಅಪ್ರಾಪ್ತರಿಗೆ ಕಿರುಕುಳ ನೀಡಿ, ಕೋಮುವಾದಿ ಹೇಳಿಕೆಗಳಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಪ್ರಾಪ್ತರಲ್ಲಿ ಒಬ್ಬರ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜುಲೈ 5 ರಂದು ಪುತ್ತೂರು ಕಸಬಾ ಗ್ರಾಮದ ಬೀರಮಲೆ ಬೆಟ್ಟದ ಬಳಿ ದೂರುದಾರರ ಮಗ ಮತ್ತು ಆತನಿಗೆ ಪರಿಚಿತವಾಗಿರುವ ಹುಡುಗಿಯ ಜೊತೆ ಕುಳಿತಿದ್ದಾಗ ಆರೋಪಿಗಳು ಬಂದಿದ್ದಾರೆ. ಇಬ್ಬರೂ ಅಪ್ರಾಪ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯರ ಸಮ್ಮುಖದಲ್ಲೇ ಆರೋಪಿಗಳು ಸಂತ್ರಸ್ತರ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ ಮತ್ತು ನಂತರ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಕೋಮುವಾದಿ ಹೇಳಿಕೆಗಳೊಂದಿಗೆ ಪ್ರಸಾರ ಮಾಡಿದ್ದಾರೆ ಎಂದು ಅವರು ಹೇಳಿದರು.
ತನಿಖೆಯ ನಂತರ, ಪುರುಷೋತ್ತಮ್ (43) ಮತ್ತು ರಾಮಚಂದ್ರ (38) ಎಂಬುವವರನ್ನು ಬಂಧಿಸಲಾಗಿದೆ.
ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement