
ಬೆಂಗಳೂರು: ಬೆಂಗಳೂರಿನ ಪ್ರತಿಷ್ಛಿತ ಪ್ರದೇಶಳಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಗಳಲ್ಲಿ ತಿರುಗಾಡುತ್ತಾ ಅಲ್ಲಿನ ಮಹಿಳೆಯರು ಮತ್ತು ಯುವತಿಯರ ಅಂಗಾಂಗಳನ್ನು ಫೋಕಸ್ ಮಾಡಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ದೂರ್ತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಹೌದು.. ಚರ್ಚ್ ಸ್ಟ್ರೀಟ್, ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಇತರ ಜನಪ್ರಿಯ ಸ್ಥಳಗಳಲ್ಲಿ ಮಹಿಳೆಯರ ಅನುಮತಿಯಿಲ್ಲದೇ ಅವರ ದೇಹವನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 26 ವರ್ಷದ ಗುರುದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ಮಹಿಳೆಯರ ರಹಸ್ಯ ವಿಡಿಯೋ ಚಿತ್ರೀಕರಣ
ಬಂಧಿತ ಗುರುದೀಪ್ ಸಿಂಗ್ ನಗರದ ಪ್ರತಿಷ್ಠಿತ ಪ್ರದೇಶಗಳಿಗೆ ಹೋಗಿ ಅಲ್ಲಿ ಯುವತಿಯರು ಮತ್ತು ಮಹಿಳೆಯರ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ. ಬಳಿಕ ಆ ವಿಡಿಯೋಗಳನ್ನು ತನ್ನ ಇನ್ ಸ್ಟಾಗ್ರಾಮ್ ಮತ್ತು ಥ್ರೆಡ್ಸ್ ಖಾತೆಗಳಲ್ಲಿ (@indianwalk1m) ಅಪ್ಲೋಟ್ ಮಾಡಿ ಅದಕ್ಕೆ ಅಶ್ಲೀಲ ಶೀರ್ಷಿಕೆಗಳನ್ನು ನೀಡುತ್ತಿದ್ದ.
ದೂರ್ತನ ರಹಸ್ಯ ಬಯಲಿಗೆಳೆದ ಸಂತ್ರಸ್ಥೆ
ಇನ್ನು ಈ ಗುರುದೀಪ್ ಸಿಂಗ್ ಈ ರೀತಿ ನೂರಾರು ಹೆಣ್ಣುಮಕ್ಕಳ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದು, ಇದೀಗ ಈ ದೂರ್ತನ ರಹಸ್ಯವನ್ನು ಓರ್ವ ಸಂತ್ರಸ್ಥೆ ಬಯಲಿಗೆಳೆದಿದ್ದಾರೆ. @divya_gandotra ಎಂಬ ಯುವತಿ ಈತನ ದುಷ್ಕೃತ್ಯವನ್ನು ಬಯಲಿಗೆಳದಿದ್ದು, ತನಗಾದ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಯುವತಿ ತನ್ನ ಕೆಲ ವಿಡಿಯೋಗಳನ್ನು ಯಾರೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ ಎಂದು ನನ್ನ ಸ್ನೇಹಿತರು ನನಗೆ ಮಾಹಿತಿ ನೀಡಿದರು. ಈ ಬಗ್ಗೆ ನಾನು ಪರಿಶೀಲಿಸಿದಾಗ ನನ್ನ ವಿಡಿಯೋಗಳು ಮಾತ್ರವಲ್ಲದೆ ನೂರಾರು ಹೆಣ್ಣುಮಕ್ಕಳ ವಿಡಿಯೋಗಳು ಪೋಸ್ಟ್ ಆಗಿರುವುದು ನನ್ನ ಗಮನಕ್ಕೆ ಬಂದಿದೆ.
ಮೊದಲು ನಮ್ಮ ಅನುಮತಿ ಇಲ್ಲದೇ ನಮ್ಮ ವಿಡಿಯೋಗಳನ್ನು ಅದೂ ರಹಸ್ಯವಾಗಿ ಚಿತ್ರೀಕರಿಸುವುದೇ ತಪ್ಪು. ಅಂತಹುದರಲ್ಲಿ ಅವುಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗುತ್ತಿದೆ. ಇದು ಅಕ್ಷಮ್ಯ.. ಖಾಸಗಿತನದ ಮೇಲಿನ ದಾಳಿ.. ಕೂಡಲೇ ಅವುಗಳನ್ನು ಡಿಲೀಟ್ ಮಾಡಬೇಕು. ಅಲ್ಲದೆ ಈ ದೂರ್ತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಯುವತಿ ಪೋಸ್ಟ್ ಮಾಡಿದ್ದಾರೆ.
10 ಸಾವಿರಕ್ಕೂ ಅಧಿಕ ಫಾಲೋವರ್ ಗಳು
ಇನ್ನು ಈ ದೂರ್ತ ಗುರುದೀಪ್ ಸಿಂಗ್ ನ @indianwalk1m ಖಾತೆಗೆ ಇನ್ ಸ್ಟಾಗ್ರಾಮ್ ನಲ್ಲಿ 10 ಸಾವಿರಕ್ಕೂ ಅಧಿಕ ಫಾಲೋವರ್ ಗಳಿದ್ದಾರೆ. ಮಹಿಳೆಯರನ್ನು ಹಿಂಬಾಲಿಸಿ ಅವರ ಅಶ್ಲೀಲ ಭಂಗಿಯ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ಅಪ್ಲೋಡ್ ಮಾಡುವುದನ್ನೇ ಈತ ಕಾಯಕ ಮಾಡಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು
ಇನ್ನು ಯುವತಿ ಮಾಡಿದ ಪೋಸ್ಟ್ ಗೆ ಕೆಲವೇ ಗಂಟೆಗಳಲ್ಲಿ ಕ್ರಮಕೈಗೊಂಡಿರುವ ಪೊಲೀಸರು ಆರೋಪಿ ಹಾಗೂ @indianwalk1m ಖಾತೆಯ ಅಡ್ಮಿನ್ ಗುರುದೀಪ್ ಸಿಂಗ್ ನನ್ನು ಬಂಧಿಸಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದ್ದು ಆತನ ಫೋಟೋ ಸಹಿತ ವರದಿ ಪ್ರಕಟಿಸಿದೆ.
ಯಾರು ಈ ಗುರುದೀಪ್ ಸಿಂಗ್?
ಅಂದಹಾಗೆ ಬಂಧಿತ ಗುರುದೀಪ್ ಸಿಂಗ್ ಬೆಂಗಳೂರಿನ ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದು, ಕೆಲಸ ಅರಸಿ ತನ್ನ ಸಹೋದರನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ. ಈತ ಹೊಟೆಲ್ ಮ್ಯಾನೇಜ್ ಮೆಂಟ್ ಪದವೀದರ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ (ದಕ್ಷಿಣ) ಲೋಕೇಶ್ ಜಗಲಾಸರ್ ಅವರು, "ಮಹಿಳೆಯರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಎಫ್‌ಐಆರ್ ಮೂಲಕ ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಅಲ್ಲದೆ ಇನ್‌ಸ್ಟಾಗ್ರಾಮ್ ಖಾತೆಯನ್ನು ಹಿಂಪಡೆಯುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
Advertisement