
ಬೆಂಗಳೂರು: ರಾಜ್ಯದಲ್ಲಿ 'ಸಿಎಂ ಕುರ್ಚಿ' ಸುತ್ತ ವ್ಯಾಪಕ ಚರ್ಚೆ ನಡೆಯುತ್ತಿರುವಂತೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ವಕೀಲರ ಸಂಘದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಸಾಕಷ್ಟು ಒಳ ಅರ್ಥಕ್ಕೂ ಕಾರಣವಾಯಿತು.
ಹೌದು. ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ಪರೋಕ್ಷವಾಗಿ ಮತ್ತೊಮ್ಮೆ ಸಿಎಂ ಕುರ್ಚಿಯ ವಿಚಾರ ಪ್ರಸ್ತಾಪಿಸಿದರು. ಅವಕಾಶ ಸಿಗೋದು ಬಹಳ ಕಷ್ಟ, ಅವಕಾಶ ಸಿಕ್ಕಿದಾಗ ಅದನ್ನು ಬಿಡೋಕೆ ಹೋಗಬಾರದು. ಏನೇ ಆದರೂ ಸಿಎಂ ಸ್ಥಾನಕ್ಕಾಗಿ ಹೋರಾಟ ಮುಂದುವರೆಸುತ್ತೇನೆ ಎಂಬರ್ಥದಲ್ಲಿ ಮಾತನಾಡಿದರು.
ಸಭಾಂಗಣದ ಇಕ್ಕೆಲಗಳಲ್ಲಿ ನಿಂತಿದ್ದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಇಷ್ಟೊಂದು ಖುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ. ಖುರ್ಚಿ ಸಿಗುವುದೇ ಕಷ್ಟ. ಖುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು. ನಿಮ್ಮನ್ನು ನೋಡಿದರೆ ತ್ಯಾಗಿಗಳ ತರಹ ಕಾಣುತ್ತಾ ಇದ್ದೀರಿ ಎಂದು ವ್ಯಂಗ್ಯಭರಿತವಾಗಿ ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವಂತೆಯೇ 'ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಕುರ್ಚಿ ಕುರಿತು ನೀಡಿದ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿತು.
ವಕೀಲರ ಸಂಘಕ್ಕೆ ಪ್ರತಿ ವರ್ಷ 5 ಲಕ್ಷ ರೂ: ವಕೀಲರ ಸಂಘಕ್ಕೆ ಪ್ರತಿ ವರ್ಷ ರೂ.5 ಲಕ್ಷವನ್ನು ಕೆಂಪೇಗೌಡ ಜಯಂತಿ ಆಚರಣೆಗೆ ನೀಡಲಾಗುವುದು. ಸಂಘದ ಉಪಯೋಗಕ್ಕಾಗಿ ರೂ.5 ಕೋಟಿಯನ್ನು ಜಿಬಿಎಯಿಂದ ನೀಡಲಾಗುವುದು. ಕೆಂಪೇಗೌಡ ಪ್ರಶಸ್ತಿಯನ್ನು ಕಡ್ಡಾಯವಾಗಿ ಇಬ್ಬರು ವಕೀಲರಿಗೆ ಪ್ರತಿ ವರ್ಷ ನೀಡಲಾಗುವುದು ಎಂದು ಹೇಳಿದರು.
ಒಂದು ವಾರದೊಳಗೆ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಗ್ರಿಡ್ ವ್ಯವಸ್ಥೆ ಒದಗಿಸಲು ಪರಿಶೀಲನೆ ನಡೆಸಲಾಗುವುದು. ಇದರ ಬಗ್ಗೆ ಹಿಂದೆಯೇ ಮಾತುಕತೆಯಾಗಿತ್ತು. ನೀವು ಅಧಿಕಾರಿಗಳ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳಬೇಕು. ಜೊತೆಗೆ ಈ ಸಂಸ್ಥೆಗೆ ಭೂಮಿ ಬೇಕು ಎಂದು ಹೇಳಿದ್ದೀರಿ. ಆದ ಕಾರಣಕ್ಕೆ 10 ಎಕರೆ ಕಂದಾಯ ಭೂಮಿಯನ್ನು ಲಭ್ಯತೆ ನೋಡಿಕೊಂಡು ನೀಡಲಾಗುವುದು. ನಗರದ 20 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಇದ್ದರೆ ನೀವೇ ಹುಡುಕಿ. ನಾವು ನೀಡುವ ಹಣವನ್ನು ನಿಮಗೆ ಉಪಯೋಗವಾಗುವ ಉತ್ತಮ ಕೆಲಸಗಳಿಗೆ ವಿನಿಯೋಗಿಸಿ ಎಂದು ಸಲಹೆ ನೀಡಿದರು.
ನಾಲ್ಕು ʼಕೆʼಗಳನ್ನು ಮರೆಯಬಾರದು: ಕೆಂಪೇಗೌಡರು ಉದಾರ ಮನಸ್ಸಿನಿಂದ ಬೆಂಗಳೂರು ಕಟ್ಟಿದರು. ನಮ್ಮ ಮೂಲವನ್ನು ಮರೆತರೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ನಾವು ನಾಲ್ಕು ʼಕೆʼಗಳನ್ನು ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯನವರು, ಕನ್ನಡ ಸಾಹಿತ್ಯವನ್ನು ಬೆಳಗಿ, ನಾಡಗೀತೆ ಬರೆದ ಕುವೆಂಪು ಅವರು, ವಿಕಾಸ ಸೌಧ ಕಟ್ಟಿದ ಎಸ್.ಎಂ ಕೃಷ್ಣ ಅವರನ್ನು ಮರೆಯಬಾರದು ಎಂದರು.
ಬೆಂಗಳೂರಿನ ವಕೀಲರ ಸಂಘ 25 ಸಾವಿರ ಸದಸ್ಯತ್ವ ಹೊಂದಿದ್ದು, ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
Advertisement