
ಚಾಮರಾಜನಗರ: ಇಲ್ಲಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕೊತ್ತಲವಾಡಿ ಗ್ರಾಮದ ಬಳಿಯ ಪ್ರದೇಶದ ಕಲ್ಲು ಕ್ವಾರಿಯಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸುಮಾರು ಐದರಿಂದ ಆರು ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು, ವಿಷಪ್ರಾಶನ ಮಾಡಿ ಕೊಂದಿರಬಹುದು ಎಂದು ಅವರು ಶಂಕಿಸಿದ್ದಾರೆ.
ಅರಣ್ಯ ಇಲಾಖೆ ಪ್ರಕಾರ, ಗುರುವಾರ ಚಿರತೆಯ ಮೃತದೇಹದ ಬಳಿ ನಾಯಿ ಮತ್ತು ಕರುವಿನ ಮೃತದೇಹಗಳು ಪತ್ತೆಯಾಗಿವೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸದ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಾವು ಮಾದರಿಗಳನ್ನು ಸಂಗ್ರಹಿಸಿ ಮೈಸೂರಿನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದೇವೆ. ವರದಿಗಳ ಆಧಾರದ ಮೇಲೆ, ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದು ಅವರು ಹೇಳಿದರು.
ಜೂನ್ 26 ರಂದು ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯದಲ್ಲಿ ಹೆಣ್ಣು ಹುಲಿ ಮತ್ತು ಅದರ ನಾಲ್ಕು ಮರಿಗಳು ಸಾವಿಗೀಡಾಗಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ.
Advertisement