ದೇವನಹಳ್ಳಿ ಭೂಸ್ವಾಧೀನ ಬಿಕ್ಕಟ್ಟು: ಜುಲೈ 15 ರಂದು ಸಿಎಂ ಅಂತಿಮ ತೀರ್ಮಾನ

ದೇವನಹಳ್ಳಿಯಲ್ಲಿ ಎರಡು ಗುಂಪಿನ ಜನರಿದ್ದಾರೆ. ಕೆಲವರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ.
CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್‌ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 15ರಂದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆಂದು ಸಚಿವ ಎಂಬಿ.ಪಾಟೀಲ್ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವನಹಳ್ಳಿಯಲ್ಲಿ ಎರಡು ಗುಂಪಿನ ಜನರಿದ್ದಾರೆ. ಕೆಲವರು ಭೂಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು 449 ಎಕರೆ ಜಮೀನನ್ನು ಬಿಟ್ಟುಕೊಡಲು ಸಿದ್ಧವಾಗಿದ್ದು, ಎಕರೆಗೆ 3.5 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ರೈತರಲ್ಲೇ ಈ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿವೆ. ಸರ್ಕಾರ ಎಲ್ಲಾ ರೀತಿಯ ಸಾಧಕ-ಬಾಧಕಗಳನ್ನೂ ಪರಿಶೀಲಿಸುತ್ತಿದೆ ಎಂದು ಹೇಳಿದರು.

ಶನಿವಾರʻಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿʼ ಹೆಸರಿನಲ್ಲಿ ಕೆಲವು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, 449 ಎಕರೆಯನ್ನು ಸರ್ಕಾರಕ್ಕೆ ಕೊಡುವುದಾಗಿ ಹೇಳಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಮೊದಲು ಅಧಿಸೂಚನೆ ಹೊರಡಿಸಿದ್ದೇ ಇಷ್ಟು ಭೂಮಿಗೆ. ಸರ್ಕಾರ ನಿಜವಾದ ರೈತರ ದನಿಗೆ ಬೆಲೆ ಕೊಡುತ್ತದೆಯೇ ವಿನಃ ರೈತರ ಹೆಸರಿನಲ್ಲಿ ಏನೇನೋ ಮಾತನಾಡುತ್ತಿರುವವರಿಗಲ್ಲ ಎಂದು ತಿಳಿಸಿದರು.

ದೇವನಹಳ್ಳಿ ಸುತ್ತಮುತ್ತ ಯಾವ್ಯಾವ ಬಿಲ್ಡರ್‌ಗಳು ಎಷ್ಟೆಷ್ಟು ಭೂಮಿ ಖರೀದಿಸಿದ್ದಾರೆ, ಯಾರ ಜೊತೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ, ಯಾವ ರಾಜಕಾರಣಿಗಳ ಜಮೀನು ಎಷ್ಟಿದೆ, ಹೋರಾಟದ ಹಿಂದೆ ಯಾರ ಕುಮ್ಮಕ್ಕಿದೆ ಎನ್ನುವುದೆಲ್ಲ ನಮಗೆ ಗೊತ್ತಿದೆ. ದೇವನಹಳ್ಳಿ ಸುತ್ತಲಿನ ಪರಿಸರದಲ್ಲಿ ಕೃಷಿ ಉಳಿಯಬೇಕು ಎನ್ನುವ ಕೂಗೂ ಎದ್ದಿದೆ. ಹೀಗಾಗಿ, ಸರಕಾರವು ಶಾಶ್ವತ ಕೃಷಿ ವಲಯ ಮಾಡುವ ಬಗ್ಗೆಯೂ ಚಿಂತಿಸುತ್ತಿದೆ. ಈಗ ಕೆಲವರು ಇದು ಬೇಡ ಎನ್ನುತ್ತಿದ್ದಾರೆ. ಈ ರೀತಿಯ ದ್ವಂದ್ವ ಸರಿಯಲ್ಲ ಎಂದರು.

CM Siddaramaiah
ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟದಲ್ಲಿ ಬಿರುಕು: 449 ಎಕರೆ ಜಮೀನು ನೀಡಲು ರೈತರು ಮುಂದು! ಕಾನೂನು ತಜ್ಞರೊಂದಿಗೆ ಸಿಎಂ ಚರ್ಚೆ

ಭೂಸ್ವಾಧೀನ ಬೇಡವೆಂದು ಕೆಲವು ಸಾಹಿತಿಗಳು, ಚಿಂತಕರು ನಮ್ಮ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಅದನ್ನು ನಾನು ವಿರೋಧಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಡುವ ಹಕ್ಕಿದೆ. ನಾವು ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ನಮ್ಮ ಐವತ್ತು-ಆರವತ್ತು ಶಾಸಕರ ಮೇಲೆ ಕಣ್ಣಿಟ್ಟು, ಏಜೆಂಟರನ್ನು ಕಳಿಸುತ್ತಿದೆ ಎಂದು ನಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಆದರೆ, ನಮ್ಮಲ್ಲಿ 140ಕ್ಕೂ ಹೆಚ್ಚು ಶಾಸಕರಿದ್ದಾರೆ. ಪಕ್ಷಾಂತರ ಆಗಬೇಕೆಂದರೆ 80ರಿಂದ 90 ಶಾಸಕರು ಹೋಗಬೇಕು. ಈಗ ಯಾರೂ ಅಷ್ಟು ಮೂರ್ಖರಿಲ್ಲ ಎಂದು ಹೇಳಿದರು.

ಈ ಹಿಂದೆಯೂ 17 ಶಾಸಕರು ಬಿಜೆಪಿಗೆ ಹೋದರು. ಈಗ ಅದೆಲ್ಲಾ ನಡೆಯುವುದಿಲ್ಲ. ವಾಸ್ತವವಾಗಿ, ಬಿಜೆಪಿ-ಜೆಡಿಎಸ್ ಕೂಟದ 18-20 ಶಾಸಕರೇ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com