
ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ದುಷ್ಕರ್ಮಿಗಳು ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.
ಅಂಚೆಪಾಳ್ಯದ ನಿವಾಸಿ ತೇಜಸ್ ಹಲ್ಲೆಗೊಳಗಾದ ವ್ಯಕ್ತಿ. ಆಟೋ ಚಾಲಕನಾಗಿರುವ ತೇಜಸ್ ಕೆಲಸ ಮುಗಿಸಿ, ಶುಕ್ರವಾರ ರುದ್ರಪ್ಪ ಗಾರ್ಡನ್ ನಲ್ಲಿರುವ ಬಾರ್'ಗೆ ಸ್ನೇಹಿತ ಸಂತೋಷ್ ಜೊತೆ ಹೋಗಿದ್ದ. ಇಬ್ಬರೂ ಮದ್ಯಪಾನ ಮಾಡುತ್ತಿದ್ದಾಗ ರಾಹುಲ್, ಪ್ರಜ್ವಲ್, ಅಭಿಷೇಕ್ ಎಂಬುವವರು ಬಾರ್'ಗ ಬಂದಿದ್ದಾರೆ.
ಮೂವರು ಕ್ಷುಲ್ಲಕ ವಿಚಾರಕ್ಕೆ ಸಂತೋಷ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ತೇಜಸ್ ಸಂತೋಷ್ ಬೆಂಬಲಕ್ಕೆ ನಿಂದಿದ್ದಾರೆ. ಬಳಿಕ ಬಾರ್ ನಿಂದ ಹೊರಹೋದ ಮೂವರು ಆರೋಪಿಗಳು ಮಾರಕಾಸ್ತ್ರಗಳಿಂದ ವಾಪಸ್ಸಾಗಿದ್ದಾರೆ. ಈ ವೇಳೆ ಆಟೋ ಹತ್ತಲು ಸಿದ್ಧನಾಗಿದ್ದ ತೇಜಸ್ ನನ್ನು ಹೊರಗೆಳೆದು ಹಲ್ಲೆ ನಡಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತೇಜಸ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ತೇಜಸ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವೇಳೆ ಸಂತೋಷ್, ತೇಜಸ್ ಜೊತೆಗಿದ್ದನೋ, ಅಥವಾ ದಾಳಿಗೂ ಮುನ್ನ ಆತ ಹೊರಟು ಹೋಗಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement