
ಬೆಂಗಳೂರು: ಬುಧವಾರ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿಯ ಸಭೆಯಲ್ಲಿ ಜಾತಿ ಗಣತಿಗಾಗಿ ದೇಶದಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತೆಲಂಗಾಣದ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ತೆಗೆದುಕೊಂಡು ಪ್ರಸ್ತಾವಿತ ರಾಷ್ಟ್ರೀಯ ಜನಗಣತಿಯನ್ನು ನಡೆಸಬೇಕು ಎಂದು ಅವರು ಹೇಳಿದರು.
ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಬುಧವಾರ ನಡೆದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು 'ಬೆಂಗಳೂರು ಘೋಷಣೆ' ಎಂದು ಕರೆದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
'ಜನಗಣತಿಯು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ಉದ್ಯೋಗ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು'. ಜೊತೆಗೆ ಜಾತಿಗಳನ್ನು ಸಹ ಪ್ರಮುಖವಾಗಿ ಪರಿಗಣಿಸಬೇಕು.
ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ರದ್ದುಗೊಳಿಸುವುದು. ಇದರಿಂದಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಒಬಿಸಿಗೆ ಸೂಕ್ತ ಮೀಸಲಾತಿ ಪಡೆಯಲು ಅವಕಾಶ ನೀಡುತ್ತದೆ.
ಸಂವಿಧಾನದ 15 (4)ನೇ ವಿಧಿಯ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ಸಿಗುವಂತಾಗಬೇಕು.
ಸಾಮಾಜಿಕ ನ್ಯಾಯವನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಸಮಾಜದ ಅಂಚಿನಲ್ಲಿರುವ ವರ್ಗಗಳ ಪರವಾಗಿ ಮಾತನಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು 'ನ್ಯಾಯ ಯೋಧ' ಎಂದು ಕರೆದು ಸಲಹಾ ಮಂಡಳಿಯು ಸರ್ವಾನುಮತದಿಂದ ಧನ್ಯವಾದ ಅರ್ಪಿಸಿತು.
'ರಾಹುಲ್ ಗಾಂಧಿ ಅವರ ದೃಢ ಸಂಕಲ್ಪವು ಮನುವಾದಿ ಮೋದಿ ಸರ್ಕಾರವನ್ನು ದೇಶದಲ್ಲಿ ಜಾತಿ ಗಣತಿ ನಡೆಸುವ ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಗೆ ಶರಣಾಗುವಂತೆ ಮಾಡಿದೆ. ಈ ಐತಿಹಾಸಿಕ ಸಾಧನೆಗೆ ರಾಹುಲ್ ಗಾಂಧಿ ಅವರಿಗೆ ಭಾರತದ ಎಲ್ಲ ಹಿಂದುಳಿದ ವರ್ಗಗಳ ಪರವಾಗಿ ಮಂಡಳಿಯು ತನ್ನ ಮುಕ್ತ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದೆ' ಎಂದು ಸಿದ್ದರಾಮಯ್ಯ ಹೇಳಿದರು.
ಜಾತಿ ಸಮೀಕ್ಷೆ ನಡೆಸುವ ಕೇಂದ್ರದ ನಿರ್ಧಾರವನ್ನು ಒಂದು ಮೈಲಿಗಲ್ಲು ಎಂದು ಬಣ್ಣಿಸಿದ ಮುಖ್ಯಮಂತ್ರಿ, ನಮ್ಮ ಸಂವಿಧಾನವು ಕಲ್ಪಿಸಿರುವಂತೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವಲ್ಲಿ ಜಾತಿ ಗಣತಿಯು ಕೇವಲ ಒಂದು ಸಣ್ಣ ಹೆಜ್ಜೆಯಾಗಿದೆ. ಕೈಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಮತ್ತು ನಮ್ಮ ಹೃದಯದಲ್ಲಿ ನ್ಯಾಯದೊಂದಿಗೆ, ನಾವು ಈ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದರು.
'ನ್ಯಾಯ ಯೋಧ ರಾಹುಲ್ ಗಾಂಧಿ ಅವರ ಅಚಲ ನಾಯಕತ್ವದಲ್ಲಿ, ದೇಶದಲ್ಲಿ ಸಮಾನತೆ ಮತ್ತು ಸಮಾನ ಸಮಾಜಕ್ಕೆ ಕಾರಣವಾಗುವ ಸಾಮಾಜಿಕ ಸಬಲೀಕರಣದ ಅಂತಿಮ ಸಾಂವಿಧಾನಿಕ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ' ಎಂದು ಸಿದ್ದರಾಮಯ್ಯ ಹೇಳಿದರು.
Advertisement