
ಬೆಂಗಳೂರು: ಕೇಂದ್ರೀಯ ತನಿಖಾ ದಳದ (CBI) ಅಧಿಕಾರಿ ಸೋಗಿನಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಂತ್ರಸ್ತನನ್ನು ಕುಮಾರ್ ಎಂದು ಗುರುತಿಸಲಾಗಿದ್ದು, ಡೆತ್ ನೋಟ್ ಪತ್ತೆಯಾಗಿದೆ. ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಲವಾರು ಬ್ಯಾಂಕ್ ಖಾತೆಗಳಿಗೆ 11 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಒತ್ತಾಯಿಸಲಾಗಿದೆ. ಕಿರುಕುಳ ಮತ್ತು ಅನಾರೋಗ್ಯದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವ್ಯಕ್ತಿ ಹೇಳಿಕೊಂಡಿದ್ದಾನೆ.
ಕೆಲಗೆರೆ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಕುಮಾರ್ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಮಾರ್, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.
ಡೆತ್ ನೋಟ್ ಪ್ರಕಾರ, 'ನಿರ್ಲಕ್ಷಿಸಬೇಡಿ' ಎಂದು ಕುಮಾರ್ ಎಚ್ಚರಿಸಿದ್ದು, ವಿಕ್ರಮ್ ಗೋಸ್ವಾಮಿ ಎಂಬ ವ್ಯಕ್ತಿಯಿಂದ ನನಗೆ ಕರೆ ಬಂತು. ತಾನು ಸಿಬಿಐ ಅಧಿಕಾರಿಯಾಗಿದ್ದು, ನನ್ನ ಹೆಸರಿನಲ್ಲಿ ಬಂಧನ ವಾರಂಟ್ ಹೊಂದಿರುವುದಾಗಿ ತಿಳಿಸಿದರು. 1.95 ಲಕ್ಷ ರೂ. ಠೇವಣಿ ಇಡುವಂತೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ.
ನಕಲಿ ಸಿಬಿಐ ಅಧಿಕಾರಿ ತನಗೆ ಪದೇ ಪದೆ ಕರೆ ಮಾಡಿ, ಹಲವಾರು ಬ್ಯಾಂಕ್ ಖಾತೆಗಳಿಗೆ ಹೆಚ್ಚಿನ ಹಣವನ್ನು ವರ್ಗಾಯಿಸುವಂತೆ ಕೇಳಿದರು. ಅದರಂತೆ ಒಟ್ಟು 11 ಲಕ್ಷ ರೂ.ಗಳನ್ನು ನಾನು ಅವರಿಗೆ ವರ್ಗಾಯಿಸಿದ್ದೇನೆ. ಈ ಕಿರುಕುಳ ಮತ್ತು ಅನಾರೋಗ್ಯದಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಕುಮಾರ್ ವಂಚಕರ ಮೊಬೈಲ್ ಸಂಖ್ಯೆಗಳನ್ನು ಉಲ್ಲೇಖಿಸಿದ್ದು, ಚನ್ನಪಟ್ಟಣದ ಎಂಕೆ ದೊಡ್ಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಡೆತ್ ನೋಟ್ ಮತ್ತು ಹೇಳಲಾದ ವಹಿವಾಟುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಕುಮಾರ್ ಅವರ ಫೋನ್ ಲಾಕ್ ಆಗಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Advertisement