
ಬೆಂಗಳೂರು: 7 ವರ್ಷಗಳ ಬಳಿಕ ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ (Kannada flag) ಮತ್ತೆ ಹಕ್ಕು ಮಂಡಿಸಿದ್ದು, ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, 'ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರೀ ಹೆಸರಿಗೆ ಮಾತ್ರ ಇದೆ. ಈಗಿರುವ ಕನ್ನಡದ ಬಾವುಟ ಅಧಿಕೃತ ಅಲ್ಲ. ಅದೇ ಬಾವುಟ ಅಧಿಕೃತಗೊಳಿಸಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ' ಎಂದು ತಿಳಿಸಿದರು.
ಅಂತೆಯೇ ಶೀಘ್ರದಲ್ಲೇ ತಂಗಡಗಿ ನೇತೃತ್ವದ ನಿಯೋಗ ದೆಹಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದ್ದಾರೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತತೆ ಹಾಗೂ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
'ಕನ್ನಡ ಬಾವುಟಕ್ಕೆ ಒಪ್ಪಿಗೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮಾತಾಡುತ್ತಾರೆ. ದಯಮಾಡಿ ಕೇಂದ್ರದಿಂದ ಕನ್ನಡ ಬಾವುಟಕ್ಕೆ ಒಪ್ಪಿಗೆ ಕೊಡಿಸಲಿ. ಶಾಸ್ತ್ರೀಯ ಸ್ಥಾನಮಾನ ವಿಚಾರದಲ್ಲಿ ಅನುದಾನ ಕೊಡಿಸಲಿ. ತಮಿಳುನಾಡಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಆದರೆ ಕನ್ನಡಕ್ಕಿಲ್ಲ. ಜುಲೈ ಅಂತ್ಯ ವೇಳೆಗೆ ನಿಯೋಗದ ಜತೆ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡುತ್ತೇವೆ' ಎಂದು ಹೇಳಿದರು.
ಕನ್ನಡ ಧ್ವಜಕ್ಕೆ ಒತ್ತಾಯ ಇದೇ ಮೊದಲೇನಲ್ಲ..
ಇನ್ನು ಕನ್ನಡ ಧ್ವಜಕ್ಕೆ ಕರ್ನಾಟಕ ಸರ್ಕಾರದ ಒತ್ತಾಯ ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ 2017 ರಲ್ಲೇ ಬಾವುಟ ಅಧಿಕೃತ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ (Siddaramaiah) ಸರ್ಕಾರ ಮನವಿ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಪತ್ರ ಬರೆಯುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದೆ.
Advertisement