
ಕಲಬುರಗಿ/ಬೀದರ್: ಮಾಜಿ ಸಚಿವ, ಪ್ರಸ್ತುತ ಔರಾದ್ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಅತ್ಯಾಚಾರ ಆರೋಪ ಸಂಬಂಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಬೀದರ್ ಜಿಲ್ಲಾ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಪ್ರತೀಕ್ ಚೌಹಾಣ್ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದು, ಪ್ರತೀಕ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಭಾನುವಾರ ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ಪ್ರತೀಕ್‌ಗಾಗಿ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ದೂರು ದಾಖಲಿಸಿರುವ ಮಹಿಳೆಯನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.
ಏತನ್ಮಧ್ಯೆ, ಎಕ್ಸ್‌ಪ್ರೆಸ್‌ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಔರಾದ್ ಶಾಸಕ ಪ್ರಭು ಚೌಹಾಣ್, ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಇನ್ನು ಔರಾದ್ ತಾಲ್ಲೂಕಿನ ಹೊಕ್ರಾನಾ ಪೊಲೀಸ್ ಠಾಣೆಯಲ್ಲಿ ಯುವತಿ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಪ್ರತಿದೂರು ದಾಖಲಿಸಲಾಗಿದೆ ಎಂದು ಹೇಳಿದರು. ಬಿಜೆಪಿ ಮಾಜಿ ಕೇಂದ್ರ ಸಚಿವ ಭಗವಂತ್ ಖುಬಾ ಅವರ ಪ್ರಚೋದನೆಯಿಂದ ತಮ್ಮ ಮಗನ (ಪ್ರಭು ಚೌಹಾಣ್) ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಪ್ರಭು ಚೌಹಾಣ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದ ಉದ್ಗೀರ್ ತಾಲೂಕು ಮೂಲದ ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ 2023ರಲ್ಲಿ ತಮ್ಮ ಮತ್ತು ಪ್ರತೀಕ್ ಚೌಹಾಣ್ ನಡುವೆ ವಿವಾಹ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿಸಿದ್ದಾರೆ. ನಿಶ್ಚಿತಾರ್ಥದ ನಂತರ, ಪ್ರತೀಕ್ ತನ್ನನ್ನು ಬೀದರ್ ಜಿಲ್ಲೆಯ ಘಮ್ಸಾಬಾಯಿ ಬೊಂಟಿ ಥಂಡಾ, ಬೆಂಗಳೂರಿನ ಲಾತೂರ್, ಶಿರಡಿ, ಬೀದರ್ ಸೇರಿದಂತೆ ಹಲವಾರು ಸ್ಥಳಗಳಿಗೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಾರೆ. ಒಂದು ಸ್ಥಳದಲ್ಲಿ ಪ್ರತೀಕ್ ತನ್ನನ್ನು ಗಾಯಗೊಳಿಸಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
25 ವರ್ಷದ ಸಂತ್ರಸ್ತ ಮಹಿಳೆ ತನ್ನ ತಾಯಿ ಮತ್ತು ಸಹೋದರನ ಜೊತೆ ಪ್ರಭು ಚೌಹಾಣ್ ಅವರಿಗೆ ಮದುವೆ ದಿನಾಂಕವನ್ನು ನಿಗದಿಪಡಿಸುವಂತೆ ವಿನಂತಿಸಲು ಔರಾದ್ ತಾಲ್ಲೂಕಿನ ಘಮ್ಸಾಬಾಯಿ ಬೊಂಟಿ ಥಂಡಾಗೆ ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮದುವೆ ದಿನಾಂಕವನ್ನು ನಿಗದಿಪಡಿಸುವ ಬದಲು, ಪ್ರಭು ಚೌಹಾಣ್ ಅವರ ಬೆಂಬಲಿಗರು ತಮ್ಮ ಸಹೋದರ ಮತ್ತು ಇತರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಮತ್ತೊಂದೆಡೆ, ಪ್ರಭು ಚವಾಣ್ ಅವರು, ಹೌದು... ತಮ್ಮ ಮಗ ಮತ್ತು ಉದ್ಗೀರ್ ತಾಲೂಕಿನ ಮಹಿಳೆಯ ನಡುವೆ 2023ರಲ್ಲಿ ನಿಶ್ಚಿತಾರ್ಥ ನಡೆದಿತ್ತು. ಆದರೆ ಆ ಮಹಿಳೆಗೆ ಅದಾಗಲೇ ಇನ್ನೊಬ್ಬ ಯುವಕನ ಜೊತೆ ಸಂಬಂಧವಿದೆ ಎಂದು ಗೊತ್ತಾಯಿತು. ಈ ಬಗ್ಗೆ ಆಕೆಯನ್ನೇ ನೆರವಾಗಿ ಕೇಳಿದಾಗ ಹೌದು ಎಂದು ಒಪ್ಪಿಕೊಂಡಿದ್ದಳು. ಹೀಗಾಗಿ 2024ರ ನವೆಂಬರ್‌ನಲ್ಲಿ ವಿವಾಹ ನಿಶ್ಚಿತಾರ್ಥ ಮುರಿದುಬಿತ್ತು. ನಂತರ ನಿಶ್ಚಿತಾರ್ಥಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ ಎಂದು ಹೇಳಿ ಹಣಕ್ಕಾಗಿ ಚೌಕಾಶಿ ಮಾಡಲು ಬಯಸಿದ್ದರು. ಆದರೆ ನಾನು ಆ ಮೊತ್ತವನ್ನು ಪಾವತಿಸಲು ನಿರಾಕರಿಸಿದೆ. ನಿಶ್ಚಿತಾರ್ಥಕ್ಕೆ ಖರ್ಚು ಮಾಡಿದ ಹಣದ ಅರ್ಧದಷ್ಟನ್ನು ಮಾತ್ರ ಪಾವತಿಸುವುದಾಗಿ ಹೇಳಿದೆ.
ಇದ್ದಕ್ಕಿದ್ದಂತೆ ಹುಡುಗಿಯ ತಾಯಿ, ಸಹೋದರ ಮತ್ತು ಆಕೆಯ ಸಂಬಂಧಿಕರು ಏಪ್ರಿಲ್ 5ರಂದು, ಅಂದರೆ ನನ್ನ ಹುಟ್ಟುಹಬ್ಬದ ಆಚರಣೆಯ ಹಿಂದಿನ ದಿನ, ಔರಾದ್ ತಾಲೂಕಿನ ಘಮ್ಸಥೆಬಾಯಿ ಬೊಂಟಿ ಥಂಡಾದಲ್ಲಿರುವ ಮನೆಗೆ ಬಂದರು. ಅಲ್ಲಿ ಹುಟ್ಟುಹಬ್ಬದ ಆಚರಣೆಯ ಸಿದ್ಧತೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರು. ಅಲ್ಲಿದ್ದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆಗ ನನ್ನ ಬೆಂಬಲಿಗರು ಅವರನ್ನು ತಡೆದು ವಾಪಸ್ ಕಳುಹಿಸಿದರು. ಆ ನಂತರ ಮಹಿಳೆ ನನ್ನ ಮಗ ಪ್ರತೀಕ್ ವಿರುದ್ಧ ದೂರು ದಾಖಲಿಸಿದ್ದು ಇದಕ್ಕೆ ಭಗವಂತ್ ಖೂಬಾ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದರು.
Advertisement