
ಕೋಲಾರ: ಬೆಲೆ ಏರಿಕೆಯ ಬಿಸಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಈ ಮಧ್ಯೆ ಸಾಲು ಸಾಲು ಹಬ್ಬ ಗಳು ಬರುತ್ತಿದ್ದು, ಹಬ್ಬಗಳಿಗೆ ಅನಿವಾರ್ಯವಾಗಿ ತರಕಾರಿಗಳನ್ನ ಖರೀದಿ ಮಾಡಲೇ ಬೇಕಾಗಿದೆ. ಈ ನಡುವೆ ಮಹಾರಾಷ್ಟ್ರ ಸೇರಿದಂತೆ ದೇಶದ ಉತ್ತರ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಮಳೆ ಹೀಗೆಯೇ ಮುಂದುವರೆದಿದ್ದೇ ಆದರೆ, ಟೊಮೆಟೊ ಬೆಲೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಒಂದು ಕ್ರೇಟ್ ಟೊಮೆಟೊ (15 ಕೆಜಿ) 750 ರೂ.ಗೆ ಮಾರಾಟವಾಗಿದೆ. ಮೂರು ದಿನಗಳ ಹಿಂದೆ ಬೆಲೆ ಪ್ರತಿ ಕ್ರೇಟ್‌ಗೆ 250-350 ರೂ.ಗಳಷ್ಟಿತ್ತು.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂದಿನ ವಾರದ ವೇಳೆಗೆ, ಕರ್ನಾಟಕದಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಕೆಜಿಗೆ 85 ರೂ.ಗೆ ತಲುಪುತ್ತದೆ ಎಂದು ಸಗಟು ವ್ಯಾಪಾರಿಗಳು ಭವಿಷ್ಯ ನುಡಿದಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡಿಗೆ ಪೂರೈಕೆಯಲ್ಲಿ ಪರಿಣಾಮ ಬೀರಿದೆ ಎಂದು ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ಕಿರಣ್ ಅವರು ಹೇಳಿದ್ದಾರೆ.
ಕೋಲಾರದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು, ಭಾನುವಾರ ಎಪಿಎಂಸಿ ಮಾರುಕಟ್ಟೆಯಿಂದ 2,500 ಟನ್‌ಗಳಿಗೂ ಹೆಚ್ಚು ಟೊಮೆಟೊಗಳನ್ನು ಹೊತ್ತ 200 ಕ್ಕೂ ಹೆಚ್ಚು ವಾಹನಗಳು ವಿವಿಧ ಸ್ಥಳಗಳಿಗೆ ತೆರಳಿದವರು ಎಂದು ಅವರು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಬೆಲೆಗಳು ತೀವ್ರವಾಗಿ ಕುಸಿದಿರುವುದರಿಂದ ಕೋಲಾರದಲ್ಲಿಯೂ ಸಹ ಗುಣಮಟ್ಟದ ಟೊಮೆಟೊಗೆ ಬೇಡಿಕೆ ಹೆಚ್ಚಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇದು ಟೊಮೆಟೊ ಬೆಳೆಯ ಮೇಲೆ ಪರಿಣಾಮ ಬೀರಿದೆ ಎಂದು ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ರೈತ ಮತ್ತು ವ್ಯಾಪಾರಿ ಸಿಎಂಆರ್ ಶ್ರೀನಾಥ್ ಮಾಹಿತಿ ನೀಡಿದ್ದಾರೆ.
ನೆರೆಯ ರಾಜ್ಯದಲ್ಲಿ ಇನ್ನೊಂದು ವಾರ ಮಳೆ ಮುಂದುವರಿದರೆ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲೆಗಳು ಪ್ರತಿ ಕ್ರೇಟ್‌ಗೆ 1,000 ರಿಂದ 1,200 ರೂ.ಗಳಿಗೆ ತಲುಪಬಹುದು ಎಂದು ಅವರು ಹೇಳಿದ್ದಾರೆ.
Advertisement