
ಬೆಂಗಳೂರು: ಅನುಕಂಪದ ಆಧಾರದ ಮೇಲೆ ನೇಮಕಾತಿ ಅರ್ಜಿಗಳನ್ನು ಸ್ವೀಕರಿಸಿದ 90 ದಿನಗಳ ಒಳಗೆ ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.
ಮೊಹಬೂಬ್ ಪಟೇಲ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ಫೆಬ್ರವರಿ 23, 2022 ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿತ್ತು.
ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಅನುಕಂಪದ ನೇಮಕಾತಿ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತು.
ಅನುಕಂಪದ ನೇಮಕಾತಿಗಾಗಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿರಲಿ ಅಥವಾ ಇಲ್ಲದಿರಲಿ, ಪ್ರಾಧಿಕಾರವು ಸ್ಪಷ್ಟ ಸಂವಹನದೊಂದಿಗೆ 30 ದಿನಗಳ ಒಳಗೆ ಲಿಖಿತವಾಗಿ ಸ್ವೀಕರಿಸಬೇಕು. ಅರ್ಜಿದಾರರು ವಿಧವೆ, ಅನಕ್ಷರಸ್ಥ ಅಥವಾ ಇತರ ಸಂದರ್ಭಗಳಲ್ಲಿ, ಅರ್ಜಿಯನ್ನು ಸಲ್ಲಿಸುವಲ್ಲಿ ಅವರಿಗೆ ಸಹಾಯ ಮಾಡಲು ಇಲಾಖೆಗಳು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಎಲ್ಲಾ ಅರ್ಜಿಗಳನ್ನು ಅರ್ಜಿ ಸ್ವೀಕರಿಸಿದ ದಿನಾಂಕದಿಂದ 90 ದಿನಗಳ ಒಳಗೆ ನಿರ್ಧರಿಸಬೇಕು. ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲದಿದ್ದರೆ, ಅರ್ಜಿದಾರರಿಗೆ ತಕ್ಷಣವೇ ಸಮಂಜಸವಾದ ಮಾಹಿತಿಯನ್ನು ತಿಳಿಸಬೇಕು ಎಂದು ಸೂಚನೆ ನೀಡಿದೆ.
Advertisement