
ಬೆಂಗಳೂರು: ರೈತರ ಅತಿಯಾದ ರಸಾಯನಿಕ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುತ್ತಿದ್ದು, ಶೇ.43ಕ್ಕಿಂತಲೂ ಹೆಚ್ಚು ಭೂಮಿ ನೈಸರ್ಗಿಕ ಇಂಗಾಲವನ್ನು ಕಳೆದುಕೊಂಡು ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕಳವಳ ವ್ಯಕ್ತಪಡಿಸಿದರು.
ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು (ಡಿಸಿಗಳು) ಮತ್ತು ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ಎರಡು ದಿನಗಳ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.
ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಪರಿಸ್ಥಿತಿ ನಿಭಾಯಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲುವಂತೆ ಹಾಗೂ ಈ ನಿಟ್ಟಿನಲ್ಲಿ ರೈತರಿಗೆ ಶಿಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ರೈತರ ಆತ್ಮಹತ್ಯೆ ಸಂಖ್ಯೆಗಳು ಕಡಿಮೆಯಾಗಿವೆ. ಮುಂದೆಯೂ ರೈತರು ಆತ್ಮಹತ್ಯೆಗೆ ಶರಣಾಗದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ, ಗ್ರಾಮ ಮಟ್ಟದಲ್ಲಿ ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳನ್ನು ಮತ್ತಷ್ಟು ಸಕ್ರಿಯಗೊಳಿಸಬೇಕು. ಖಾಸಗಿ ಲೇವಾದೇವಿಗಾರರು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಶೇ. 60 ಕ್ಕಿಂತ ಕಡಿಮೆ ಉತ್ತೀರ್ಣತೆ ಇರುವ ಸ್ಥಳಗಳಲ್ಲಿ ಡಿಡಿಪಿಐ ಮತ್ತು ಬಿಇಒಗಳಿಗೆ ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಹೇಳಿದರು.
ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷದಿಂದ ಎರಡು ಲಕ್ಷದಷ್ಟು ಕಡಿಮೆಯಾಗುತ್ತಿದೆ, ಇದನ್ನು ತಡೆಗಟ್ಟಲು ಪೋಷಕರೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು ಮತ್ತು ಬಿಇಒಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
Advertisement