
ತುಮಕೂರು: ಜನರ ತೀವ್ರ ವಿರೋಧ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ನಿಷೇಧಾಜ್ಞೆ ನಡುವೆಯೂ ರೈತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆ ರೈತರ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಶಾಸಕರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಕೈಬಿಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ್ದಾರೆ. ಇದರೊಂದಿಗೆ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಈ ನಡುವೆ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಪರಮೇಶ್ವರ್ ಅವರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.
1,500 ಕೋಟಿ ರೂ.ವೆಚ್ಚದಲ್ಲಿ ನಾಲೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕೆಲಸ ಆರಂಭವಾಗುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.
1,500 ಕೋಟಿ ರೂ.ವೆಚ್ಚದಲ್ಲಿ ನಾಲೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕೆಲಸ ಆರಂಭವಾಗುತ್ತಿದ್ದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ದೂರಿದರು.
ಹೇಮಾವತಿ ಎಕ್ಸ್‌ಪ್ರೆಸ್ ನಾಲೆ ಕಾಮಗಾರಿ ಅನುಷ್ಠಾನಕ್ಕೆ ಜಲ ಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಲಾಗಿತ್ತು. ಆ ಭಾಗದ ಸಂಸದರು, ಶಾಸಕರು ಭಾಗವಹಿಸಿದ್ದರು. ತಾಂತ್ರಿಕ ಸಮಿತಿ ರಚಿಸಲು ಒತ್ತಾಯಿಸಿದ್ದರು. ಸಮಿತಿ ಕಾಮಗಾರಿ ಕೈಗೊಳ್ಳಲು ಸಮ್ಮತಿ ನೀಡಿದ ನಂತರವೇ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತಾವವನ್ನು ಸಮಿತಿ ತಿರಸ್ಕರಿಸಿದ್ದರೆ ಯೋಜನೆಯನ್ನೇ ರದ್ದು ಮಾಡುತ್ತಿದ್ದೆವು. ಈ ಎಲ್ಲ ವಿಷಯ ಗೊತ್ತಿದ್ದರೂ ಬಿಜೆಪಿ ಏಕೆ ವಿರೋಧ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಶೇ.40ರಷ್ಟು ಕಾಮಗಾರಿ ಮುಗಿದಿದೆ. ಹೀಗಿರುವಾಗ ಕಾಮಗಾರಿಯನ್ನು ನಿಲ್ಲಿಸುವ ಪ್ರಮೇಯವೇ ಬರುವುದಿಲ್ಲ ಎಂದರು.
ಅಲ್ಲಿರುವವರು, ಇಲ್ಲಿರುವವರು ಎಲ್ಲರೂ ನಮ್ಮ ರೈತರೇ. ಎಲ್ಲರ ಹಿತವನ್ನು ನಾವು ಕಾಪಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿ, ಶಾಸಕರಾದ ಕೃಷ್ಣಪ್ಪ, ಸುರೇಶ್ ಗೌಡ ಅವರಿಗೆ ಈ ಯೋಜನೆ ವಿಚಾರವಾಗಿ ಅರಿವಿದೆ ಎಂದು ಹೇಳಿದ್ದಾರೆ. ಅವರೂ ಈ ಬಗ್ಗೆ ಮಾತನಾಡಿದ್ದಾರೆ. ಆದರೂ ಈಗ ಹೋರಾಟ ಮಾಡುತ್ತಿದ್ದಾರೆ. ಇದನ್ನು ನಾನು ತಪ್ಪು ಎಂದು ಹೇಳುವುದಿಲ್ಲ. ಮಾನಸಿಕವಾಗಿ ಎಲ್ಲಾ ಶಾಸಕರಿಗೂ ಈ ವಿಚಾರ ತಿಳಿದಿದೆ" ಎಂದು ಹೇಳಿದರು.
ವಿ.ಸೋಮಣ್ಣ ಅವರು ಈ ವಿಚಾರವಾಗಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಅವರು ದೊಡ್ಡವರು, ಕೇಂದ್ರ ಸಚಿವರು. ಅವರ ಮಾರ್ಗದರ್ಶನವನ್ನೂ ಕೇಳೋಣ ಎಂದರು.
Advertisement