
ಬೆಂಗಳೂರು: ಕಮಲ್ ಹಾಸನ್‌ಗೆ ಜ್ಞಾನದ ಕೊರತೆ ಇದೆ. ಅಜ್ಞಾನದಿಂದ ದುರಹಂಕಾರವಾಗಿ ಮಾತನಾಡುವುದು ತಪ್ಪು. ಅವರ ಹೇಳಿಕೆಯನ್ನು ಖಂಡಿಸಬೇಕಾದವರು ಪಲಾಯನ ಮಾಡಿದರು. ಯಾರೆಲ್ಲಾ ಶಿವಣ್ಣನ ರೀತಿ ಕಮಲ್ ಹಾಸನ್ ಪರವಾಗಿ ಇದ್ದಾರೋ ಅವರೆಲ್ಲರೂ ನನ್ನ ದೃಷ್ಟಿಯಲ್ಲಿ ನಾಡದ್ರೋಹಿಗಳು ಎಂದು ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.
ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚಂದ್ರು, ಭಾಷೆ ಬಗ್ಗೆ ಜ್ಞಾನ ಇಲ್ಲದೆ, ನಾನು ಹೇಳಿದ್ದೇ ಸರಿ, ನನ್ನನ್ನು ಮೀರಿಸುವವರು ಯಾರೂ ಇಲ್ಲ ಎನ್ನೋ ಧೋರಣೆಯಲ್ಲಿ ಕಮಲ್ ಹಾಸನ್ ಮಾತನಾಡಿದ್ದಾರೆ. ಇದನ್ನು ನಿಜವಾಗಿ ತಮಿಳುನಾಡಿನವರೇ ಖಂಡಿಸಬೇಕಿತ್ತು. ಇಂತದ್ದನ್ನೆಲ್ಲ ಒಬ್ಬ ದೊಡ್ಡ ವ್ಯಕ್ತಿಯಾಗಿ ಮಾಡಬಾರದು ಎಂದು ಹೇಳಬೇಕಿತ್ತು. ದೊಡ್ಡ ವ್ಯಕ್ತಿ ಎಂದು ನಾವು ಅಂದುಕೊಳ್ಳುತ್ತಿದ್ದೇವೆ ಅಷ್ಟೇ. ಸಣ್ಣತನ ತೋರಿಸಿದ್ದಾರೆ ಎಂದರು.
ಈ ಘಟನೆ ನಡೀಬಾರದಿತ್ತು, ಈ ಹೇಳಿಕೆ ಕೊಟ್ಟ ಅವ್ನು ದುರಹಂಕಾರಿ, ಅಯೋಗ್ಯ. ಅವ್ನು ಹೇಳಿದ ಹೇಳಿಕೆ ನಮ್ಮ ನಾಡಿಗೆ ಅವಮಾನ ಆಗಿದೆ. ಆ ಘಟನೆಗೆ ಸಾಕ್ಷಿಯಾಗಿದ್ದ ಶಿವರಾಜ್ ಕುಮಾರ್ ಪಲಾಯನವಾದ ಮಾಡಿ ಬಿಟ್ಟರು. ಕಮಲ್ ಹಾಸನ್ ಅವ್ರ ಹೇಳಿಕೆಯನ್ನ ಖಂಡಿಸಬೇಕಿತ್ತು. ನಾನು, ನನ್ನ ಕುಟುಂಬ ನಿಮಗೆ ಧನ್ಯವಾದ ಹೇಳ್ತೀವಿ ಆದ್ರೆ ನಾಡು, ನುಡಿ ವಿಚಾರದಲ್ಲಿ ಹೋರಾಟದ ಪರವಾಗಿ ಇರ್ತೀನಿ ಅಂತ ಹೇಳಬೇಕಿತ್ತು. ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತಲ್ಲ ಅಂತ ಹೇಳ್ತಾರೆ.
ಹಾಗಿದ್ರೆ ಕನ್ನಡ ವಿಚಾರಕ್ಕೆ ಬಂದಾಗ ನೀವೇನು ಮಾಡ್ತಿದ್ರಿ? ನನಗೆ ಅರ್ಥವೇ ಆಗಲಿಲ್ಲ ಅನ್ನೋದು ಬೇಜವಾಬ್ದಾರಿ ತನ ಎಂದರಲ್ಲದೇ ಶಿವಣ್ಣ ರೀತಿಯಲ್ಲಿ ಇನ್ನೂ ಯಾರು ಅವರ (ಕಮಲ್ ಹಾಸನ್) ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಅಂತ ಮಾರ್ಮಿಕವಾಗಿ ನುಡಿದರು.
ಕ್ಷಮೆ ಕೇಳುತ್ತಾರೋ ಬಿಡುತ್ತಾರೋ ಅದು ಬೇಕಾಗಿಲ್ಲ. ಆತ ಯೋಗ್ಯ ಅಲ್ಲ ಅಯೋಗ್ಯ ಎನ್ನೋದು ಸಾಬೀತಾಗಿದೆ. ಅವರು ನಮ್ಮ ರಾಜ್ಯಕ್ಕೆ ಬರದಂತೆ ಬಹಿಷ್ಕಾರ ಹಾಕುವಂತಹ ನಿರ್ಧಾರ ನಾವು ತೆಗೆದುಕೊಳ್ಳಬೇಕಾಗುತ್ತದೆ. ದೇಶ ಒಂದು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅಜ್ಞಾನದಿಂದ ದುರಹಂಕಾರವಾಗಿ ಮಾತನಾಡುವುದು ತಪ್ಪು ಎಂದರು.
ನಾಡು-ನುಡಿಗೆ ಧಕ್ಕೆ ಬಂದಾಗ ಪ್ರೀತಿ ಗೀತಿ ಬದಿಗೊತ್ತಿ ಖಂಡಿಸಬೇಕಿತ್ತು. ರಾಜಕುಮಾರ್ ಅವರ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಕುಟುಂಬ ಮಾತ್ರ ಕನ್ನಡ ನಾಡಲ್ಲ. ನಮ್ಮ ಶಿವಣ್ಣನವರು ಪ್ರತಿಪಾದಿಸಬೇಕು ಏನೆಂದರೆ, ನಾನು ನನ್ನ ಕುಟುಂಬವನ್ನು ಹೊಗಳಿದ್ದಕ್ಕೆ ಧನ್ಯವಾದಗಳು, ಆದರೆ ನಾಡು ಮತ್ತು ನುಡಿಗೆ ಆಗಿರುವ ಧಕ್ಕೆಗೆ ನೀವು ತಪ್ಪಿತಸ್ಥರು.
ನೀವು ಕ್ಷಮೆ ಕೇಳಬೇಕು, ಈ ಹೋರಾಟದ ಪರವಾಗಿದ್ದೇನೆ ಎಂದು ಹೇಳಬೇಕಿತ್ತೇ ಹೊರತು ಸುಮ್ಮನೆ ಕುಳಿತಿರುವುದು ಸರಿಯಲ್ಲ. ನೀವು ಹೇಳಿದ್ದು ನನಗೆ ಇಷ್ಟ ಆಗಿಲ್ಲ ಇಲ್ಲಿಂದ ನಾನು ಹೊರಡುತ್ತೇನೆ ಎಂದಾದರೂ ಶಿವಣ್ಣ ಹೇಳಬೇಕಿತ್ತು. ಆದರೆ ಅವರು ನನಗೆ ಅರ್ಥವೇ ಆಗಲಿಲ್ಲ ಅಥವಾ ಕೇಳಿಸಿಕೊಳ್ಳಲೇ ಇಲ್ಲ ಎನ್ನೋದು ಬೇಜವಾಬ್ದಾರಿತನ ಎಂದು ವಾಗ್ದಾಳಿ ನಡೆಸಿದರು.
Advertisement