
ವಿಜಯಪುರ: ಕೆನರಾ ಬ್ಯಾಂಕಿನ ಮನಗೂಳಿ ಶಾಖೆಯಿಂದ 59 ಕೆಜಿ ಚಿನ್ನವನ್ನು ಕಳ್ಳರು ದೋಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರು ಚಿನ್ನವನ್ನು ಠೇವಣಿ ಇಟ್ಟಿದ್ದರು ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ತಿಳಿಸಿದ್ದಾರೆ. 59 ಕೆಜಿ ಚಿನ್ನ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಅಂದಾಜಿಸಿದ್ದು ಮೇ 26ರಂದು ಕೆನರಾ ಬ್ಯಾಂಕ್ ಮನಗೂಳಿ ಶಾಖೆಯಿಂದ ವ್ಯವಸ್ಥಾಪಕರು ದೂರು ದಾಖಲಿಸಿದರು. ಮೇ 23ರಂದು ಸಂಜೆ ಬ್ಯಾಂಕ್‌ಗೆ ಬೀಗ ಹಾಕಿ ಸಿಬ್ಬಂದಿಗಳು ತೆರಳಿದ್ದರು. ಮೇ 24 ಮತ್ತು 25 ರಂದು (ನಾಲ್ಕನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್ ರಜೆ ಇತ್ತು. ಮೇ 26 ಸೋಮವಾರ ಸಿಬ್ಬಂದಿಗಳು ಬ್ಯಾಂಕ್ ಗೆ ಬಂದಿದ್ದು ಸ್ವಚ್ಛತ ಸಿಬ್ಬಂದಿ ಶಾಖೆಯನ್ನು ಸ್ವಚ್ಛಗೊಳಿಸುವ ವೇಳೆ ಶಟರ್ ಬೀಗಗಳನ್ನು ಕತ್ತರಿಸಿರುವುದನ್ನು ಅವರು ಗಮನಿಸಿದ್ದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಪಾಸಣೆಯ ನಂತರ, ಕಳ್ಳರು ಬ್ಯಾಂಕಿಗೆ ನುಸುಳಿ ಲೂಟಿ ಮಾಡಿರುವುದು ಕಂಡುಬಂದಿದೆ. ಬ್ಯಾಂಕ್ ಅಧಿಕಾರಿಗಳು ಲೂಟಿ ಮಾಡಿದ ಸೊತ್ತನ್ನು ಮೌಲ್ಯಮಾಪನ ಮಾಡಿದಾಗ 59 ಕೆಜಿ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಕಂಡುಬಂದಿದೆ. ಇದರ ಮೌಲ್ಯ 53 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ನಿಂಬರ್ಗಿ ಹೇಳಿದರು.
ಮೇ 24 ಮತ್ತು 25 ರ ಮಧ್ಯರಾತ್ರಿ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ನಾವು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
Advertisement