
ಬೆಂಗಳೂರು: ಕನ್ನಡ ಮತ್ತು ಕನ್ನಡಿಗರನ್ನು ಜನರನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದ್ದಾರೆ.
ರಾಜ್ಯ ಸರ್ಕಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಅವರ ಸನ್ಮಾನ ಸಭೆಯಲ್ಲಿ ಮಾತನಾಡಿದ ಮುಷ್ತಾಕ್ ಅವರು, ಕರ್ನಾಟಕದಲ್ಲಿ ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆ ಏಕೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ಆಗಾಗ್ಗೆ ಕೇಳುತ್ತವೆ. ಅದಕ್ಕೆ ನಾನು ಕನ್ನಡದ ಬಗ್ಗೆ ನಿಮ್ಮ ತಿಳುವಳಿಕೆ ತಪ್ಪು. ಕನ್ನಡದಷ್ಟು ಸಹಿಷ್ಣು ಭಾಷೆ ಇನ್ನೊಂದಿಲ್ಲ. ಇದು ಇತರ ಅನೇಕರಿಗೆ ವೇದಿಕೆಯನ್ನು ನೀಡಿದ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಮತ್ತು ಒಂದು ಬೂಕರ್ ಪ್ರಶಸ್ತಿಯನ್ನು ಹೊಂದಿರುವ ಹೆಗ್ಗಳಿಕೆಯನ್ನು ಕನ್ನಡ ಭಾಷೆ ಹೊಂದಿದೆ ಎಂದು ಮುಷ್ತಾಕ್ ಹೇಳಿದರು.
ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಹೇಳಿಕೆಗೆ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕಮಲ್ ಅಭಿನಯದ ಥಗ್ ಲೈಫ್ ಚಿತ್ರವನ್ನು ನಿಷೇಧಿಸಬೇಕು ಎಂದು ಕನ್ನಡಪರ ಸಂಘಟನೆಗಳು, ಬಿಜೆಪಿ ಒತ್ತಾಯಿಸುತ್ತಿವೆ. ಈ ಮಧ್ಯೆ ಕನ್ನಡದ ಗರಿಮೆಯನ್ನು ತಿಳಿಸುವ ಮೂಲಕ ಬಾನು ಮುಷ್ತಾಕ್ ಅವರು ಕಮಲ್ ಹಾಸನ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಕತೆಗಳ ಮೂಲಕ ಮತ್ತು ಅನುವಾದದ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಬಾನು ಮುಷ್ತಾಕ್ , ದೀಪಾ ಬಾಸ್ತಿ ಅವರಿಗೆ ತಲಾ 10 ಲಕ್ಷ ಪುರಸ್ಕಾರ ನೀಡಲಾಗುವುದು ಎಂದು ಘೋಷಿಸಿದರು. ಮುಷ್ತಾಕ್ ಅವರ ಪುಸ್ತಕಗಳನ್ನು ಕರ್ನಾಟಕದ ಎಲ್ಲಾ ಸರ್ಕಾರಿ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
Advertisement