ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನಟ ಕಮಲ್ ಹಾಸನ್ ಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ. ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಕಟ್ಟೆ ಹೊಡೆದಿದ್ದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಕಮಲ್ ಹಾಸನ್ ಉದ್ಧಟತನ ಮೆರೆದಿದ್ದು ಇದಕ್ಕೆ ಇದೀಗ ಕರ್ನಾಟಕ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಚಿತ್ರತಂಡ ಹೈಕೋರ್ಟ್ ಮೊರೆ ಹೋಗಿತ್ತು. ಮಂಗಳವಾರ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕ್ಷಮೆ ಕೇಳಿದ್ರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದ್ರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಕಮಲ್ ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸ್ತೇವೆ ನ್ಯಾಯಮೂರ್ತಿಗಳು ಹೇಳಿದರು. ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಪ್ರತಿಕ್ರಿಯೆ ನೀಡಲು ಮಧ್ಯಾಹ್ನ 2.30ರವರೆಗೆ ಸಮಯಾವಕಾಶ ಕೋರಿದರು. ನಂತರ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕಮಲ್ ಪರ ವಕೀಲರು, ಥಗ್ ಲೈಫ್ ಸಿನಿಮಾದ ನಿರ್ಮಾಪಕರು, ಸಿನಿಮಾ ಅನ್ನು ರಾಜ್ಯದಲ್ಲಿ ಬಿಡುಗಡೆ ಮಾಡದೇ ಇರಲು ನಿರ್ಧರಿಸಿದ್ದಾರೆ. ಅಲ್ಲದೆ, ಫಿಲಂ ಚೇಂಬರ್ ಜೊತೆಗೆ ನಿರ್ಮಾಪಕರು ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಹೀಗಾಗಿ ನ್ಯಾಯಾಲಯ ಅರ್ಜಿಯನ್ನು ಜೂನ್ 10ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ಮಾತನಾಡಿದ್ದ KFCC ಅಧ್ಯಕ್ಷ ಎಂ.ನರಸಿಂಹಲು ಕ್ಷಮೆಯಾಚಿಸದಿದ್ದರೆ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಪದೇ ಪದೇ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಥವಾ ಕ್ರಿಮಿನಲ್ ಅಪರಾಧಗಳ ಹಿನ್ನೆಲೆಯುಳ್ಳ 36 ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಗಡಿಪಾರು ಮಾಡಲಾಗುತ್ತಿರುವ ವ್ಯಕ್ತಿಗಳು ಬಂಟ್ವಾಳ, ಪುತ್ತೂರು, ಕಡಬ, ಸುಳ್ಯ, ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದಾರೆ. ಅರುಣ್ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ, ಅಬ್ದುಲ್ ಖಾದರ್, ಅಶ್ರಫ್ ಸೇರಿದಂತೆ 15 ಮುಸ್ಲಿಮರು ಮತ್ತು 21 ಹಿಂದೂಗಳು ಗಡಿಪಾರು ಪಟ್ಟಿಯಲ್ಲಿದ್ದಾರೆ. ಅಬ್ದುಲ್ ರಹೀಂ ಹತ್ಯೆ ಬೆನ್ನಲ್ಲೇ ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚಿಸಿತ್ತು. ಈ ಕಾರ್ಯಪಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಈ ಕಾರ್ಯಪಡೆ ಕೋಮುವಾದದ ವಿರುದ್ಧವಲ್ಲ, ಹಿಂದೂಗಳ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ವಿಜಯಪುರದ ಮನಗೂಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದು 59 ಕೆಜಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಮೇ 24ರ ಮಧ್ಯರಾತ್ರಿ ಈ ಕಳ್ಳತನ ನಡೆದಿದೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕರು ದೂರು ದಾಖಲಿಸಿದರು. ಶಟರ್ ಬೀಗಗಳನ್ನು ಕತ್ತರಿಸಿ ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನವಾಗಿರುವ ಚಿನ್ನಾಭರಣದ ಮೌಲ್ಯ 53 ಕೋಟಿ ಎಂದು ಅಂದಾಜಿಸಲಾಗಿದೆ. ಕಳ್ಳತನ ಸಂಬಂಧ ತನಿಖೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ತಿಳಿಸಿದ್ದಾರೆ.
ಆರು ವರ್ಷ ಬಾಲಕಿ ಮೇಲೆ 55 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರು ಮೌಲ್ವಿಯ ತಂದೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಮೌಲ್ವಿಯ ತಂದೆಯಾಗಿರುವ ಆರೋಪಿಗೆ ಗೌರವದ ದೃಷ್ಟಿಯಿಂದ ಮಸೀದಿ ಆವರಣದಲ್ಲಿ ಉಳಿಯಲು ಕೊಠಡಿ ನೀಡಲಾಗಿತ್ತು. ಇದನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಿಯು ಬಾಲಕಿಗೆ ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ, ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.
ಆಲಮಟ್ಟಿ ಅಣೆಕಟ್ಟು ಎತ್ತರದ ವಿಚಾರದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೈಗಾರಿಕೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಒತ್ತಾಯಿಸಿದ್ದಾರೆ. ಇಂತಹ ಅಪ್ರಸ್ತುತ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಫಡ್ನವೀಸ್ ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ಕೆಡಿಸಬಾರದು. ಕರ್ನಾಟಕದ ನೆಲ, ಭಾಷೆ ವಿಚಾರದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಅವರ ಪಕ್ಷದ ಸಂಬಂಧ ಮರೆತು ಒಂದಾಗಬೇಕು. ನಮ್ಮ ನೆಲ, ನೀರನ್ನು ಸಂರಕ್ಷಿಸಲು ನಾವೆಲ್ಲರೂ ಒಟ್ಟಾಗಬೇಕು ಎಂದು ಪಾಟೀಲ್ ಪ್ರತಿಪಾದಿಸಿದರು.
Advertisement