Skydeck ಯೋಜನೆ: ಬೆಂಗಳೂರಲ್ಲಿ ಜಾಗ ಫೈನಲ್; 68 ಎಕರೆ ಪ್ರದೇಶ ಗುರುತಿಸಿದ ಸರ್ಕಾರ!

ಈ ಟವರ್ ಸ್ಥಾಪನೆಗೆ ಈವರೆಗೆ ಇದ್ದ ಸ್ಥಳ ಅಂತಿಮ ಗೊಂದಲ ಬಗೆಹರಿದಿದ್ದು, ಸರ್ಕಾರ ಕೆಂಗೇರಿ ಬಳಿ ನಾಡಪ್ರಭು ಲೇಔಟ್ ನಲ್ಲಿ (NPKL) ಸ್ಕೈಡೆಕ್ ನಿರ್ಮಿಸಲು ಸ್ಥಳ ಅಂತಿಮಗೊಳಿಸಿದೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್.
Updated on

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿನ ಉಪಕ್ರಮವಾಗಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಸ್ಕೈಡೆಕ್ ಯೋಜನೆಗೆ ಹೊಸ ಸ್ಥಳ ಅಂತಿಮಗೊಳಿಸಿ ಸರ್ಕಾರ ಪ್ರಕಟಿಸಿದೆ.

ಯೋಜನೆಯನು ಪ್ರವಾಸೋದ್ಯಮ ಉತ್ತೇಜಿಸುವ, ಪ್ರವಾಸಿಗರ ಆಕರ್ಷಣೆಗೆ ಕೇಂದ್ರವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದ ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸುತ್ತ 360 ಡಿಗ್ರಿ ವ್ಯಾಪ್ತಿಯಲ್ಲಿ ಬೆಂಗಳೂರು ಸೌಂದರ್ಯ ಕಣ್ತುಂಬಿಕೊಳ್ಳಲು ಈ 250 ಮೀಟರ್ ಎತ್ತರದ ಸ್ಕೈ ಟವರ್ ಸ್ಥಾಪಿಸಲಾಗುತ್ತದೆ.

ಈ ಟವರ್ ಸ್ಥಾಪನೆಗೆ ಈವರೆಗೆ ಇದ್ದ ಸ್ಥಳ ಅಂತಿಮ ಗೊಂದಲ ಬಗೆಹರಿದಿದ್ದು, ಸರ್ಕಾರ ಕೆಂಗೇರಿ ಬಳಿ ನಾಡಪ್ರಭು ಲೇಔಟ್ ನಲ್ಲಿ (NPKL) ಸ್ಕೈಡೆಕ್ ನಿರ್ಮಿಸಲು ಸ್ಥಳ ಅಂತಿಮಗೊಳಿಸಿದೆ.

ಈ ಹಿಂದೆ ಕೆಲವು ಸ್ಥಳಗಳನ್ನು ಗುರುತಿಸಲಾಗಿತ್ತು. ಆ ಪೈಕಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಬಳಿ ಸ್ಥಾಪಿಸಲು ಪ್ರಸ್ತಾಪಿಸಲಾಗಿತ್ತು. ಆದರೆ, ಭವಿಷ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ವಿಶ್ವವಿದ್ಯಾಲಯ ಕಾರ್ಯ ಚಟುವಟಿಕೆಗೆ ತೊಂದರೆ ಆಗುವ ಹಿನ್ನೆಲೆ ಯೋಜನೆಗೆ ಇದೀಗ ಕೊಮ್ಮಘಟ್ಟದ ​​ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಇರುವ ಲೇಔಟ್‌ನ 7ನೇ ಬ್ಲಾಕ್‌ನಲ್ಲಿ 68 ಎಕರೆ ಪ್ರದೇಶವನ್ನು ಗುರ್ತಿಸಿದೆ.

ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್ ಎಂದು ಪರಿಗಣಿಸಲಾಗುತ್ತಿರುವ ಈ ಯೋಜನೆಗೆ ರೂ. 500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ನಡುವೆ ಮಂಗಳವಾರ ಉಪ ಮುಖ್ಯಂತ್ರಿ ಡಿಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು, ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್, ಬ್ರಾಂಡ್ ಬೆಂಗಳೂರಿನ ಮಹತ್ವಾಕಾಂಕ್ಷೆಯ ಯೋಜನೆ, ನಮ್ಮ ನಗರದ ಹೆಮ್ಮೆಯಾಗಲಿದೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್.
Skydeck ಯೋಜನೆಗೆ ಜ್ಞಾನಭಾರತಿ ಕ್ಯಾಂಪಸ್ ಆಯ್ಕೆ ಮಾಡಿದ BBMP: ಭೂಮಿ ಹಸ್ತಾಂತರಕ್ಕೆ ಆಸಕ್ತಿ ತೋರದ ಬೆಂಗಳೂರು ವಿವಿ!

ಈ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾರ್ಯಗತಗೊಳಿಸಬೇಕು ಎಂಬುದನ್ನು ಡಿಸಿಎಂ ನಿರ್ಧರಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆಗೆ ಗುರ್ತಿಸಲಾಗಿರುವ ಪ್ರದೇಶವು ವಿಶಾಲವಾಗಿದ್ದು, ಪೆರಿಫೆರಲ್ ರಿಂಗ್ ರಸ್ತೆ -2 ಯೋಜನೆಯ ಪ್ರಮುಖ ಅಪಧಮನಿಯ ರಸ್ತೆ ಭಾಗದೊಂದಿಗೆ ಉತ್ತಮವಾಗಿ ಸಂಪರ್ಕ ಹೊಂದಿದೆ ಎಂದೂ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಸ್ಕೈಡೆಕ್ ದೆಹಲಿಯ ಕುತುಬ್ ಮಿನಾರ್‌ಗಿಂತ ಮೂರು ಪಟ್ಟು ಎತ್ತರವಾಗಿರುತ್ತದೆ. ಈ ಗೋಪುರವು ಉದ್ಯಾನ ನಗರದ 360 ಡಿಗ್ರಿ ಸಮಗ್ರ ನೋಟವನ್ನು ನೀಡುತ್ತದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.

ಈ ನಡುವೆ ಈ ವರ್ಷದ ಕೆಂಪೇಗೌಡ ಜಯಂತಿಯನ್ನು ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮ್ಮನಹಳ್ಳಿ ಬಳಿ 5 ಎಕರೆ ಜಾಗವನ್ನು ನಿಗದಿ ಮಾಡಿದ್ದು, ಜೂನ್ 27ರಂದು ಕೆಂಪೇಗೌಡ ಜಯಂತಿ ಅಂಗವಾಗಿ ಅಂದೇ ಭೂಮಿ ಪೂಜೆ ಮಾಡಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಜಮೀನನ್ನು ವೀಕ್ಷಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಹಂಚಿಕೆಯಾದ ಭೂಮಿಯಲ್ಲಿ ಕೆಂಪೇಗೌಡರ ವಸ್ತುಸಂಗ್ರಹಾಲಯ ಬರಲಿದೆ, ಈ ಸ್ಥಳದ ಮೂಲಕ ರೈಲು ಮಾರ್ಗವೂ ಹಾದುಹೋಗುತ್ತದೆ. ಹೀಗಾಗಿ ಇಲ್ಲಿ ಒಂದು ನಿಲ್ದಾಣವನ್ನೂ ನಿರ್ಮಿಸಲಾಗುವುದು. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಸ್ಥಳ ಪರಿಶೀಲನೆ ವೇಳೆ ಶಿವಕುಮಾರ್ ಅವರೊಂದಿಗೆ ಮಾಜಿ ಸಚಿವ ಮತ್ತು ಶಾಸಕ ಎಸ್.ಟಿ. ಸೋಮಶೇಖರ್, ಬಿಡಿಎ ಆಯುಕ್ತ ಮಣಿವಣ್ಣನ್ ಮತ್ತು ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com