
ಮಂಗಳೂರು: ಜೂನ್ 4 ರಂದು ತನ್ನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ಉಳ್ಳಾಲ ಪೊಲೀಸರು ಶನಿವಾರ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಸ್ನಾತಕೋತ್ತರ ವಿದ್ಯಾರ್ಥಿನಿ ಸೆಮಿನಾರ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಳೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಈ ಬಾಂಬ್ ಬೆದರಿಕೆಯಿಂದಾಗಿ ಈ ವಾರದ ಆರಂಭದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಭದ್ರತೆ ನೀಡಲಾಗಿತ್ತು.
ಜೂನ್ 4 ರಂದು ಬೆಳಗ್ಗೆ 8.45 ರ ಸುಮಾರಿಗೆ, ಆಸ್ಪತ್ರೆಯ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯಿಂದ ಐದು ಬಾರಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು.
ಈ ಕರೆಗಳು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಲ್ಲಿ ತೀವ್ರ ಆತಂಕ ಉಂಟುಮಾಡಿತ್ತು. ಅಧಿಕಾರಿಗಳು ವ್ಯಾಪಕ ಭದ್ರತಾ ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ತಂಡಗಳು ಸೇರಿದಂತೆ ಸುಮಾರು 30 ಸಿಬ್ಬಂದಿ ನಿಯೋಜಿಸಲಾಗಿತ್ತು.
ಆಸ್ಪತ್ರೆಯ ಆವರಣದಾದ್ಯಂತ, ಮುಖ್ಯ ಕಟ್ಟಡ ಮತ್ತು ಪಾರ್ಕಿಂಗ್ ಪ್ರದೇಶಗಳು ಸೇರಿದಂತೆ, 10 ಗಂಟೆಗಳ ಕಾಲ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಈ ಸಂಬಂಧ ಬಂಧಿತ ವೈದ್ಯಕೀಯ ವಿದ್ಯಾರ್ಥಿನಿಯೇ ದೂರು ನೀಡಿದ್ದು, ಆಕೆಯ ದೂರಿನ ಆಧಾರದ ಮೇಲೆ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ರ ಸೆಕ್ಷನ್ 352(2) ಮತ್ತು 352(4) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ದೂರು ನೀಡಿದ ವಿದ್ಯಾರ್ಥಿನಿಯೇ ಆರೋಪಿ ಎಂಬುದು ತಿಳಿದು ಬಂದಿದೆ.
ತನಿಖಾಧಿಕಾರಿಗಳ ಪ್ರಕಾರ, ಈ ವಿದ್ಯಾರ್ಥಿನಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಮಾಡುತ್ತಿದ್ದು, ಜೂನ್ 4 ರಂದು ಸೆಮಿನಾರ್ ನೀಡಬೇಕಾಗಿತ್ತು. ಈ ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಿ, ಅವರ ಹೇಳಿಕೆ ಮೇಲೆ ಅವರ ಮೊಬೈಲ್ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Advertisement