ಬೆಂಗಳೂರು ಕಾಲ್ತುಳಿತ ಪ್ರಕರಣ: ಅಖಾಡಕ್ಕಿಳಿದ CID; ಬಂಧಿತ ನಾಲ್ವರು ಶೀಘ್ರದಲ್ಲೇ ವಶಕ್ಕೆ

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಪ್ರಕರಣವನ್ನು ಶುಕ್ರವಾರ ಸಂಜೆ ಸಿಐಡಿಗೆ ಹಸ್ತಾಂತರಿಸಿದರು.
Bengaluru Stampade case
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ
Updated on

ಬೆಂಗಳೂರು: 11 ಮಂದಿ ಆರ್'ಸಿಬಿ ಅಭಿಮಾನಿಗಳನ್ನು ಬಲಿ ಪಡೆದ, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಹಿಂದಿನ ಕಾರಣಕರ್ತರ ಪತ್ತೆಗೆ ಅಖಾಡಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಅಧಿಕಾರಿಗಳು ಶನಿವಾರ ಅಧಿಕೃತವಾಗಿ ಪ್ರವೇಶಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಪ್ರಕರಣವನ್ನು ಶುಕ್ರವಾರ ಸಂಜೆ ಸಿಐಡಿಗೆ ಹಸ್ತಾಂತರಿಸಿದರು. ಇದೀಗ ದುರಂತದ ಹಿಂದಿನ ಕಾರಣಕರ್ತರ ಬೇಟೆಯವನ್ನು ಸಿಐಡಿ ಅಧಿಕಾರಿಗಳು ಶುರು ಮಾಡಿದ್ದಾರೆ.

ಇದಕ್ಕಾಗಿ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ಮೇಲುಸ್ತುವಾರಿಯಲ್ಲಿ ಎಸ್ಪಿಗಳಾದ ಶುಭಾನ್ವಿತಾ, ಯತೀಶ್ ಸಾರಥ್ಯದಲ್ಲಿ 15 ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸರಿಂದ ಪ್ರಕರಣವನ್ನು ಶುಕ್ರವಾರ ಸಿಐಡಿಗೆ ಹಸ್ತಾಂತರಿಸಲಾಗಿದೆ. ಮೂರು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಕಡತಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.

ಬಾಡಿ ವಾರಂಟ್ ಮೇಲೆ ಬಂಧಿಸಲಾದ ನಾಲ್ವರನ್ನು ಕಸ್ಟಡಿಗೆ ನೀಡುವಂತೆ ಕೋರಿ ಎಸ್‌ಐಟಿ ಸೋಮವಾರ ನ್ಯಾಯಾಲಯವನ್ನು ಸಂಪರ್ಕಿಸಲಿದೆ. ನಗರದ ನ್ಯಾಯಾಲಯವು ಶುಕ್ರವಾರ ನಾಲ್ವರನ್ನು ಜೂನ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Bengaluru Stampade case
ಬೆಂಗಳೂರು ಕಾಲ್ತುಳಿತ ಪ್ರಕರಣ: ಪರಿಹಾರ ಮೊತ್ತವನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಿದ ರಾಜ್ಯ ಸರ್ಕಾರ

ಈ ನಡುವೆ ಪ್ರಕರಣವು ಅಧಿಕೃತವಾಗಿ ವರ್ಗಾವಣೆಯಾದ ಬೆನ್ನಲ್ಲೇ ತನಿಖೆಗಿಳಿದ ಸಿಐಡಿ, ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದ 7, 19, 18, 16 ಹಾಗೂ 21 ಸೇರಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗೇಟ್‌ಗಳ ಬಳಿ ತೆರಳಿ ತಪಾಸಣೆ ನಡೆಸಿತು. ಬಳಿಕ ಕ್ರೀಡಾಂ ಗಣ ಹಾಗೂ ಅದರ ಸುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅದೇ ರೀತಿ ಕಬ್ಬನ್ ಪಾರ್ಕ್ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಹಂತದ ತನಿಖೆ ಕುರಿತು ತನಿಖಾಧಿಕಾರಿಗಳಾದ ಗೌತಮ್ ಹಾಗೂ ಪುರುಷೋತ್ತಮ್ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) ಕಚೇರಿಗೂ ತೆರಳಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಲ್ತುಳಿತ ಪ್ರಕರಣದ ಆರೋಪಿಗಳಾದ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಆಡಳಿತ ಮಂಡಳಿಗಳ ವಿಚಾರಣೆಗೆ ಇನ್ನೆರಡು ದಿನಗಳಲ್ಲಿ ನೋಟಿಸ್‌ ಜಾರಿಗೊಳಿಸಲು ಸಿಐಡಿ ಮುಂದಾಗಿದೆ. ಪ್ರಕರಣದ ಕುರಿತು ಘಟನಾ ಸ್ಥಳ ಹಾಗೂ ಸ್ಥಳೀಯ ಪೊಲೀಸರು ಸಂಗ್ರ ಹಿಸಿದ್ದ ಸಾಂದರ್ಭಿಕ ಸಾಕ್ಷ್ಯಗಳನ್ನು ಸಿಐಡಿ ಪರಿಶೀಲನೆ ನಡೆಸಿದೆ. ಈ ಮಾಹಿತಿ ಅವಲೋಕಿಸಿ ಬಳಿಕ ಆರೋಪಿತರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ತಿಳಿದುಬಂದಿದೆ.

ಈಗಾಗಲೇ ಪ್ರಕರಣದಲ್ಲಿ ಕೆಎಸ್‌ಸಿಎ ಆಡಳಿತ ಮಂಡಳಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಬಂಧನ ಭೀತಿಯಿಂದ ಪಾರಾಗಿರುವ ಕೆಎಸ್‌ಸಿಎಗೆ ಸಿಐಡಿ ತನಿಖೆ ಬಿಸಿ ಮುಟ್ಟಿಸಲು ಮುಂದಾಗಿದೆ. ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆ ಸಲುವಾಗಿ ಸೋಮವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

Bengaluru Stampade case
ಕಾಲ್ತುಳಿತ: ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಎಚ್‌.ಡಿ ಕುಮಾರಸ್ವಾಮಿ ಆಗ್ರಹ

ಇದಲ್ಲದೆ ಎಸ್‌ಐಟಿ ಮೃತ 11 ಜನರ ಕುಟುಂಬ ಸದಸ್ಯರು ಮತ್ತು 64 ಗಾಯಗೊಂಡವರ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.

ಪ್ರಕರಣದ ಇಬ್ಬರು ದೂರುದಾರರಾದ 25 ವರ್ಷದ ರೋಲನ್ ಗೋಮ್ಸ್ ಮತ್ತು 21 ವರ್ಷದ ಬಿಕಾಂ ವಿದ್ಯಾರ್ಥಿ ಸಿ ವೇಣು ಅವರಿಗೂ ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ದಿನದಂದು ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸಹ ತಮ್ಮ ಹೇಳಿಕೆಗಳನ್ನು ನೀಡಬೇಕಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಮತ್ತು ಮೃತರು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ ಇತರ ಕೆಲವು ಸಿಬ್ಬಂದಿಗಳು ಸಹ ತಮ್ಮ ಹೇಳಿಕೆಗಳನ್ನು ನೀಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತ ಜಿ. ಜಗದೀಶ ಅವರಿಂದ ಪ್ರಕರಣ ಸಂಬಂಧ ಮ್ಯಾಜಿಸ್ಟೀರಿಯಲ್ ವಿಚಾರಣೆಯೂ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com