
ಕೊಪ್ಪಳ: ಐಪಿಎಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಪಂಜಾಬ್ ತಂಡವನ್ನು ಬಗ್ಗು ಬಡಿದು ಆರ್‌ಸಿಬಿ ಜಯ ಗಳಿಸಿದ ಹಿನ್ನೆಲೆ ರಾಜ್ಯದ ಇತರೆ ಅಭಿಮಾನಿಗಳಂತೆ ಕೊಪ್ಪಳ ತಾಲ್ಲೂಕಿನ ಬಂಡಿ ಹರ್ಲಾಪುರ ಗ್ರಾಮದ ಯುವಕರು ಕೂಡ ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮವನ್ನಾಚರಿಸಿದೆ.
ಪಂದ್ಯಾವಳಿಗೂ ಮುನ್ನ ಯುವಕರ ತಂಡ ಆರ್‌ಸಿಬಿ ಗೆದ್ದರೆ ಊರಿಗೆ ಮಾಂಸದೂಟ ಹಾಕಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಇದರಂತೆ ಆರ್‌ಸಿಬಿ ತಂಡವು ಕೋಟ್ಯಂತರ ಕನ್ನಡಿಗರ ಕನಸನ್ನು ನನಸು ಮಾಡಿದ ಹಿನ್ನೆಲೆ ಯುವಕರು ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿಸಿದ್ದಾರೆ.
ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದ ಮರುದಿನ ಬೆಂಗಳೂರಿನಲ್ಲಿ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ಯುವಕರು ಮುಂದೂಡಿದ್ದರು. ಇದೀಗ, ಸಂಭ್ರಮವನ್ನು ಆಚರಿಸಿದ್ದಾರೆ. ಊಟ ಸೇವನೆಗೂ ಮುನ್ನ ಗ್ರಾಮಸ್ಥರು ಅಗಲಿದವರಿಗೆ ಸಂತಾಪ ಸೂಚಿಸಿದರು. ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹಾರೈಸಿದರು.
ಸಾಂಪ್ರದಾಯಿಕ ಶೈಲಿಯಲ್ಲಿ 'ಡಂಗುರ' (ಸಾರ್ವಜನಿಕ ಘೋಷಣೆಗಳಿಗೆ ಬಳಸುವ ಡ್ರಮ್) ಬಾರಿಸುವ ಮೂಲಕ ಮತ್ತು ಬೀದಿಗಳಲ್ಲಿ ದೊಡ್ಡ ಗಂಟೆ ಬಾರಿಸುವ ಮೂಲಕ ಹಬ್ಬವನ್ನು ಘೋಷಿಸಲಾಯಿತು, ಎಲ್ಲರನ್ನೂ ಹಬ್ಬಕ್ಕೆ ಆಹ್ವಾನಿಸಲಾಯಿತು. ಈ ಹಬ್ಬಕ್ಕೆ ಸಂಪೂರ್ಣ ಗ್ರಾಮಸ್ಥರೇ ಹಣಕಾಸು ಒದಗಿಸಿದ್ದಾರೆನ್ನಲಾಗಿದೆ. ಬಂಡಿ ಹರ್ಲಾಪುರದಲ್ಲಿ ಸುಮಾರು 7,000 ಜನಸಂಖ್ಯೆ ಇದ್ದು, ಸುಮಾರು 3,000 ಜನರು ಹಬ್ಬದಲ್ಲಿ ಪಾಲ್ಕೊಂಡಿದ್ದರು.
ಕೇವಲ ಮಾಂಸಹಾರವಷ್ಟೇ ಅಲ್ಲದೆ, ಸಸ್ಯಾಹಾರಿ ಊಟಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ಥಳದಲ್ಲಿ ನೆರೆದಿದ್ದವರು ಆರ್‌ಸಿಬಿ ಪರವಾಗಿ ಘಷಣೆಗಳನ್ನು ಕೂಗಿದರು.
ಸಂಘಟಕರಲ್ಲಿ ಒಬ್ಬರಾದ ರಾಜು ಯಾದವ್ ಅವರು ಮಾತನಾಡಿ, “ಆರ್‌ಸಿಬಿ ಕಪ್ ಗೆದ್ದಪೆ, ಇಡೀ ಗ್ರಾಮಕ್ಕೆ ಮಾಂಸಾದೂಟ ಬಡಿಸುತ್ತೇವೆ ಎಂದು ನಾವು ಪ್ರತಿಜ್ಞೆ ಮಾಡಿದ್ದೆವು. ಆರಂಭದಲ್ಲಿ ವಿಜಯದ ಮರುದಿನ ಕಾರ್ಯಕ್ರಮ ನಡೆಸಲು ಯೋಜಿಸಿದ್ದೆವು. ಆದರೆ, ದುರಂತ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದೆವು. ಇದೀಗ ಹಬ್ಬ ಆಚರಿಸಲಾಗಿದ್ದು, ಅಗಲಿದ ಆತ್ಮಗಳಿಗಾಗಿ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದೇವೆಂದು ಹೇಳಿದರು.
Advertisement