
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೆರವಾಗಲು ಪ್ರತಿಪಕ್ಷ ಬಿಜೆಪಿ ಶಾಸಕರು ನಿರ್ಧರಿಸಿದ್ದು, ಬಿಜೆಪಿಯ ಎಲ್ಲ ಶಾಸಕರು ತಮ್ಮ ಒಂದು ತಿಂಗಳ ವೇತನವನ್ನು ಸಂತ್ರಸ್ತರ ಕುಟುಂಬಗಳಿಗೆ ನೀಡಲು ಮುಂದಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಭಾನುವಾರ ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, ಈಗ ಸರ್ಕಾರ ಘೋಷಿಸಿರುವ ಪರಿಹಾರ ಯಾವುದಕ್ಕೂ ಸಾಲದು. ಸರ್ಕಾರ ಪಾಪರ್ ಆಗಿಲ್ಲ ಎಂದಾದರೆ ತಲಾ ಒಂದು ಕೋಟಿ ರು. ಪರಿಹಾರ ನೀಡಬೇಕು. ನಾವು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಬಿಜೆಪಿ ಸದಸ್ಯರು ನಮ್ಮ ಒಂದು ತಿಂಗಳ ಸಂಬಳವನ್ನು ಸಂತ್ರಸ್ತರ ಕುಟುಂಬಕ್ಕೆ ನೀಡುತ್ತೇವೆ ಎಂದು ಹೇಳಿದರು.
ಪೊಲೀಸರ ಸಲಹೆಯ ಹೊರತಾಗಿಯೂ, ಸರ್ಕಾರ ಅದನ್ನು ನಿರ್ಲಕ್ಷಿಸಿದೆ. ಕಾಂಗ್ರೆಸ್ ನಾಯಕರು ಕಾನೂನನ್ನು ಉಲ್ಲಂಘಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅಧಿಕಾರ ಹೋರಾಟದಲ್ಲಿ ತೊಡಗಿಲ್ಲದಿದ್ದರೆ, ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ.
ಸಂತ್ರಸ್ತ ಕುಟುಂಬಗಳನ್ನು ಸಮಾಧಾನಪಡಿಸುವ ಬದಲು, ಕಪ್‍ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವಾದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ 8 ಮಕ್ಕಳು ಸತ್ತಿದ್ದರು. ಅನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕರು ಎಂದು ಆರೋಪಿಸಿದರು.
ಕಾನೂನನ್ನು ಪೊಲೀಸ್ ಅಧಿಕಾರಿಗಳು ಜಾರಿ ಮಾಡುತ್ತಾರೆ. ಜೂ.4ರಂದು ವಿಧಾನಸೌಧದ ಪೊಲೀಸರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನು ನಿಷೇಧಿಸಬೇಕು ಎಂದೂ ಹೇಳಲಾಗಿದೆ. ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಆಗ ಕಾನೂನು ಪುಸ್ತಕ ತೋರಿಸಿದ್ದರು. ಈಗ ಸರಕಾರವೇ ಕಾನೂನು ಉಲ್ಲಂಘಿಸಿದೆ ಎಂದು ಆಕ್ರೋಶ ಹೊರಹಾಕಿದರು.
ಇಲಾಖೆಯ ಸಿಬ್ಬಂದಿ ಹಾಗೂ ಕುಟುಂಬದವರು ಬರಬಾರದು ಎಂದು ಪೊಲೀಸರು ಸೂಚಿಸಿದ್ದರು. ಆದರೆ, ಅಲ್ಲಿ ಎಲ್ಲರ ಕುಟುಂಬದವರು ಇದ್ದರು. ಸಿಸಿಟಿವಿ ಕ್ಯಾಮರಾ ಬೇಕೆಂದು ಹೇಳಿದ್ದರೂ ಅದನ್ನು ಪಾಲಿಸಿಲ್ಲ. ಡ್ರೋನ್‍ಗೆ ಅವಕಾಶ ಇಲ್ಲ ಎಂದು ಹೇಳಲಾಗಿದೆ. ಈ ಎಲ್ಲ ಸೂಚನೆಗಳನ್ನು ಸರಕಾರ ಹರಿದು ಬಿಸಾಡಿದೆ. ಸರಕಾರವೇ ಇಷ್ಟೆಲ್ಲ ಕಾನೂನು ಉಲ್ಲಂಘನೆ ಮಾಡಿದ್ದರೂ, ಕೊನೆಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸರ ವಿರುದ್ಧ ಕ್ರಮ ವಹಿಸಲಾಗಿದೆ. ಠಾಣೆ ಪೊಲೀಸರನ್ನು ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು.
ವಿಶೇಷ ಅಧಿವೇಶನ ಕರೆಯಿರಿ
ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆ ಬಗ್ಗೆ ಚರ್ಚಿಸಲು ಸರ್ಕಾರ ವಿಧಾನಮಂಡಲದ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಬೇಕು ಎಂದು ಇದೇ ವೇಳೆ ಆರ್. ಅಶೋಕ್ ಆಗ್ರಹಿಸಿದರು.
ಸರ್ಕಾರ ಮಾಡಿದ ತಪ್ಪುಗಳ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಮೂರು ತನಿಖೆಗೆ ಆದೇಶಿಸಿದ್ದು, ಇದರಲ್ಲಿ ಯಾವ ತನಿಖೆ ನಿಜ ಎಂದು ಗೊತ್ತಾಗುತ್ತಿಲ್ಲ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕಿದೆ. ಈ ಕುರಿತು ನಾವೆಲ್ಲರೂ ಆಗ್ರಹಿ ಸುತ್ತಿದ್ದೇವೆ. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು ಎಂದು ಹೇಳಿದರು.
Advertisement