'ಬೆಂಗಳೂರು ದಿವ್ಯ ದರ್ಶನ'ಕ್ಕೆ ಉತ್ತಮ ಸ್ಪಂದನೆ: ವಾರದ ಎಲ್ಲಾ ದಿನಗಳಲ್ಲೂ ಸೇವೆ ಒದಗಿಸಲು BMTC ಮುಂದು!

ಟೂರ್ ಪ್ಯಾಕೇಜ್ ಮೂಲಕ ಬೆಳಗ್ಗೆ 8-30ಕ್ಕೆ ಮೆಜೆಸ್ಟಿಕ್​ನಿಂದ ಹೊರಟು ಸಂಜೆ 5-30 ರ ವರೆಗೆ ಎಸಿ ಬಸ್ ನಲ್ಲಿ ಪ್ರವಾಸಿಗರನ್ನು 8 ಕಡೆ ಕರೆದೊಯ್ಯಲಾಗುತ್ತದೆ. ಮತ್ತೆ ಮೆಜೆಸ್ಟಿಕ್​​ಗೆ ಬಸ್ ವಾಪಸ್ ಕರೆದುಕೊಂಡು ಬಂದು ಬಿಡಲಾಗುತ್ತದೆ.
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ
Updated on

ಬೆಂಗಳೂರು: ನಗರದ ದೇವಸ್ಥಾನಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಬಿಎಂಟಿಸಿ ಆರಂಭಿಸಿರುವ ‘ಬೆಂಗಳೂರು ದಿವ್ಯ ದರ್ಶನ’ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ವಾರದ ಎಲ್ಲಾ ದಿನಗಳಲ್ಲೂ ಸೇವೆ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ.

ಮೇ 31ಕ್ಕೆ ‘ದಿವ್ಯ ದರ್ಶನ’ ಆರಂಭವಾಗಿತ್ತು. ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಹೊರಡುವ ಬಸ್‌ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಓಂಕಾರ ಹಿಲ್ಸ್, ವಸಂತಪುರ ಇಸ್ಕಾನ್ ದೇವಸ್ಥಾನ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಸ್ಥಾನಗಳಿಗೆ ಭೇಟಿ ನೀಡಿ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ವಾಪಸ್‌ ಆಗುತ್ತದೆ.

ಬೆಳಿಗ್ಗೆ 8.30ಕ್ಕೆ ಹೊರಟು ಸಂಜೆ 6.05ಕ್ಕೆ ವಾಪಸ್‌ ಆಗುವುದರಿಂದ ಜನರು ‘ದಿವ್ಯ ದರ್ಶನ’ಕ್ಕೆ ಒಲವು ತೋರಿಸಿದ್ದರು. ಮೊದಲ ದಿನವೇ ನಾಲ್ಕು ಬಸ್‌, ಎರಡನೇ ದಿನವಾದ ಭಾನುವಾರ ನಾಲ್ಕು ಬಸ್‌ಗಳಲ್ಲಿ ಜನರು ಸಂಚರಿಸಿದ್ದರು. ಜನರ ಉತ್ತಮ ಪ್ರತಿಕ್ರಿಯೆ ಗಮನಿಸಿದ ಬಿಎಂಟಿಸಿ ಅಧಿಕಾರಿಗಳು, ಇದೀಗ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮಾತ್ರವಲ್ಲದೆ, ವಾರದ ಎಲ್ಲಾ ದಿನಗಳಲ್ಲಿ ‘ಬೆಂಗಳೂರು ದಿವ್ಯ ದರ್ಶನ’ ನಡೆಸಲು ನಿರ್ಧರಿಸಿದ್ದಾರೆ. ಜೂನ್.2ರಿಂದಲೇ ಈ ಸೇವೆ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಟೂರ್ ಪ್ಯಾಕೇಜ್ ಜನಪ್ರಿಯವಾಗುತ್ತಿದ್ದು, ಆರಂಭಿಕ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹವಾನಿಯಂತ್ರಿತ ಬಸ್‌ಗಳನ್ನು ಬಳಸಿಕೊಂಡು ಸೇವೆ ಒದಗಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ
BMTC: 'ದಿವ್ಯ ದರ್ಶನ' ವೀಕೆಂಡ್ ಟೂರ್ ಪ್ಯಾಕೇಜ್ ಆರಂಭ; ಪ್ರಸಿದ್ಧ ದೇವಾಲಯಗಳ ದರ್ಶನಕ್ಕೆ ಅವಕಾಶ

‘ದಿವ್ಯ ದರ್ಶನ’ದಲ್ಲಿ ಯಾವೆಲ್ಲ ದೇಗುಲವಿದೆ?

  • ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲ

  • ಆರ್ ಆರ್ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನ

  • ಆರ್​.ಆರ್​.ನಗರದಲ್ಲಿರುವ ಶೃಂಗಗಿರಿ ಷಣ್ಮುಖ ದೇವಾಸ್ಥಾನ

  • ಆರ್​.ಆರ್​.ನಗರದಲ್ಲಿರುವ ಕರುಮಾರಿ ಅಮ್ಮ ದೇವಾಲಯ

  • ಉತ್ತರಹಳ್ಳಿ ಬಳಿಯ ಓಂಕಾರ ಹೀಲ್ಸ್

  • ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ

  • ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲೀವಿಂಗ್

  • ಬನಶಂಕರಿಯಲ್ಲಿನ ಬನಶಂಕರಿ ದೇವಾಲಯ

ದಿವ್ಯ ದರ್ಶನ ಸಮಯ

ಬೆಳಗ್ಗೆ 8-30ಕ್ಕೆ ಮೆಜೆಸ್ಟಿಕ್​ನಿಂದ ಹೊರಟು ಸಂಜೆ 5-30 ರ ವರೆಗೆ ಎಸಿ ಬಸ್ ನಲ್ಲಿ 8 ಕಡೆ ಕರೆದೊಯ್ಯಲಾಗುತ್ತದೆ. ಮತ್ತೆ ಮೆಜೆಸ್ಟಿಕ್​​ಗೆ ಬಸ್ ವಾಪಸ್ಕರೆದುಕೊಂಡು ಬಂದು ಬಿಡಲಾಗುತ್ತದೆ.

ದಿವ್ಯ ದರ್ಶನ ಟಿಕೆಟ್ ದರ ಎಷ್ಟು?

ದಿವ್ಯ ದರ್ಶನ ಟೆಂಪರ್ ಟೂರ್ ಪ್ಯಾಕೇಜ್​ಗೆ ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ದರ ನಿಗದಿ ಮಾಡಲಾಗಿದೆ.

ದಿವ್ಯ ದರ್ಶನ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?

ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ ksrtc.in ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಬಿಎಂಟಿಸಿಯ ಸಂಪರ್ಕ ಸಂಖ್ಯೆ 080-22483777 ಅಥವಾ 7760991170 ಗೆ ಕರೆ ಮಾಡುವ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com