
ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಹಾಸ್ ಕೊಲೆ ಕೇಸ್ ಎನ್‌ಐಎಗೆ ಕೇಂದ್ರ ಗೃಹ ಇಲಾಖೆ ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಕೇಂದ್ರದಿಂದ ಪತ್ರ ಬಂದಿರುವ ಬಗ್ಗೆ ಡಿಜಿ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಯಾಕೆ ಕೊಟ್ಟರು ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎನ್‌ಐಎಗೆ ಯಾರು ಶಿಫಾರಸು ಮಾಡಿದ್ದಾರೆಂದು ಗೊತ್ತಿಲ್ಲ. ಪ್ರಕರಣ ವರ್ಗಾಯಿಸುವಂತೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಯಾವ ಆಧಾರದ ಮೇಲೆ ಎನ್‌ಐಎಗೆ ವಹಿಸುವಂತೆ ಕೇಳಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ಕುರಿತು ಪ್ರತಿಕ್ರಿಯಿಸಿ, ತುಮಕೂರು ವಿಚಾರವಾಗಿ ಭೇಟಿ ಮಾಡಿದ್ದೆ. ತುಮಕೂರು ನಗರ ಬಂದಾಗ ಗೊತ್ತಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಆರ್ಚ್ ಹಾಕಲು ಮನವಿ ಮಾಡಿದ್ದೇನೆ ಎಂದರು.
ತುಮಕೂರುವರೆಗೆ ಮೆಟ್ರೊ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ. ಉಪ ನಗರ ರೈಲು ಯೋಜನೆಯ ಬಗ್ಗೆ ಚರ್ಚೆಯೂ ನಡೆಯುತ್ತಿದೆ ಎಂದು ಹೇಳಿದರು.
ಹೇಮಾವತಿ ಗಲಾಟೆ ವಿವಾದ ವಿಚಾರವಾಗಿ ಮಾತನಾಡಿ, ‘ಪರ್ಯಾಯ ಮಾರ್ಗ ಹುಡುಕಲು ನಾವು ತೀರ್ಮಾನಿಸಿದ್ದೇವೆ. ನೀರಾವರಿ ಸಚಿವರ ಬಳಿ ಮಾತನಾಡುತ್ತೇನೆ ಎಂದು ತಿಳಿಸಿದರು.
Advertisement