
ಬೆಂಗಳೂರು: ಬೆಂಗಳೂರು ಕಾಲ್ತುಳಿತ ಘಟನೆ ಬೆನ್ನಲ್ಲೇ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದೇನೆಂಬ ವದಂತಿ ಸತ್ಯಕ್ಕೆ ದೂರವಾದದ್ದು ಎಂದು ಗೃಹ ಸಚಿವ ಪರಮೇಶ್ವರ್ ಅವರು ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಖಾತೆ ಬೇಡ ಎಂಬ ಸುದ್ದಿ ಹರಡುತ್ತಿರುವ ವಿಚಾರಕ್ಕೆ ಮಾಧ್ಯಮಗಳ ಮೇಲೆ ಗರಂ ಆದರು.
ನಿಮಗೆ ಏನು ಹೇಳಬೇಕು ಗೊತ್ತಿಲ್ಲ. ಯಾರು ಇದನ್ನೆಲ್ಲಾ ಹೇಳಿದ್ದಾರೆ ಗೊತ್ತಿಲ್ಲ. ಯಾರು ಹೀಗಂತ ಹೇಳಿದ್ದಾರೆ ಅಂತ ಮೊದಲು ಹೇಳಿ ಎಂದು ಕೋಪದಲ್ಲಿ ಪ್ರಶ್ನಿಸಿದರು.
ಯಾರು ಏನೇ ಹೇಳಲಿ. ನೀವು ನನ್ನ ಬಳಿ ನೇರವಾಗಿ ಬಂದು ಕೇಳಿ. ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ. ಈ ರೀತಿ ಒಬ್ಬರ ವ್ಯಕ್ತಿತ್ವವನ್ನ ಕೊಲೆ ಮಾಡಬಾರದು, ಇದು ಸರಿ ಎನಿಸುವುದಿಲ್ಲ. ಯಾರಿಗೂ ಶೋಭೆ ತರೋದಿಲ್ಲ, ನನ್ನನ್ನೇ ಕೇಳಿ, ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.
ನನ್ನ ಪತ್ನಿಯ ಬಳಿಯೂ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ನಾನೇ ನನಗೆ ಖಾತೆ ಬದಲಾಯಿಸಿ ಎಂದು ಸಿಎಂ ಅವರ ಬಳಿ ಹೇಳಿದ್ದೇನೆಂದು ಯಾರು ಹೇಳಿದ್ರು? ಮಾಧ್ಯಮಗಳಲ್ಲಿ 2-3 ದಿನದಿಂದ ಸುದ್ದಿ ಬರುತ್ತಿದೆ. ಈಗ ಬಂದು ಸ್ಪಷ್ಟನೆ ಕೊಡಿ ಎಂದರೆ ಹೇಗೆ? ದಯಮಾಡಿ, ಈ ರೀತಿ ಮಾಡ್ಬೇಡಿ.
ನಮ್ಮ ಅಭಿಮಾನಿಗಳು, ಮತದಾರರು ಇದ್ದಾರೆ. ಅವರೆಲ್ಲಾ ಏನೆಂದುಕೊಳ್ಳುತ್ತಾರೆ. ಏನೇ ಇದ್ದರೂ ನನ್ನನ್ನ ಕೇಳಿ, ನಾನು ಯಾರ ಬಳಿಯೂ ಆ ಖಾತೆ, ಈ ಖಾತೆ ಬೇಕು ಎಂದು ನಾನು ಯಾವಾಗಲೂ ಕೇಳಿಲ್ಲ. ಖಾತೆ ಬದಲಾವಣೆ ಬಗ್ಗೆ ಸಿಎಂ ಬಳಿ ಏನನ್ನು ಹೇಳಿಕೊಂಡಿಲ್ಲ, ಇದು ಸತ್ಯಕ್ಕೆ ದೂರವಾದುದ್ದು, ಇದು ಸುಳ್ಳು. ಇದನ್ನ ಗಣನೆಗೆ ತೆಗೆದುಕೊಳ್ಳಬಾರದು ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ಬೆಂಗಳೂರು ಕಾಲ್ತುಳಿತ ಘಟನೆ ಕುರಿತು ಮಾತನಾಡಿ, ಇಂತಹ ಘಟನೆ ಆಗಬಾರದಿತ್ತು. ಇದಕ್ಕೆ ಎಲ್ಲರೂ ಕೂಡ ನೋವು ಅನುಭವಿಸುತ್ತಿದ್ದೇವೆ. ಇದು ಒಂದು ದೊಡ್ಡ ಸವಾಲು, ಇದನ್ನ ಎದುರಿಸಬೇಕು ಅಷ್ಟೇ ಎಂದರು.
ಇದೇ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ಸಲಹೆ ಮೀರಿಗೆ ಕಾರ್ಯಕ್ರಮ ಮಾಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ನಾನು ಏನೇ ಹೇಳಿದರೂ ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈಗಲೇ ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.
Advertisement