
ಕುಮಟಾ (ಉತ್ತರ ಕನ್ನಡ ಜಿಲ್ಲೆ): ನಾಗರಹಾವು ಇಲಿ, ಕೋಳಿ ಮೊಟ್ಟೆಗಳ ನುಂಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಹಾವು ಆಹಾರ ಎಂದು ಭಾವಿಸಿ, ಒಂದು ಅಡಿ ಉದ್ದದ ಕಬ್ಬಿಣದ ಚಾಕು ನುಂಗಿದ್ದು, ನಂತರ ಅದು ಜೀರ್ಣವಾಗದೆ, ಹೊರಕ್ಕೂ ಹಾಕಲಾಗದೆ ವಿಲವಿಲ ಒದ್ದಾಡಿದ ವಿಚಿತ್ರ ಘಟನೆಯೊಂದು ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಲ್ಲಿ ನಡೆದಿದೆ.
ಕುಮಟಾ ಪಟ್ಟಣದಿಂದ ಸುಮಾರು 5 ಕಿಮೀ ದೂರದಲ್ಲಿರುವ ಹೆಗಡೆ ಗ್ರಾಮದ ರೈತ ಗೋವಿಂದ ನಾಯಕ್ ಅವರ ಮನೆಯಲ್ಲಿ ಈ ಘಡನೆ ನಡೆದಿದೆ.
ಅಡುಗೆಮನೆಯೊಳಗಿನ ಕಿಟಕಿಯ ಬಳಿ ಚಾಕು ಇಡಲಾಗಿತ್ತು. ಚಾಕು ಹೊರಗಿ ಬಿದ್ದಿತ್ತು. ಬಳಿಕ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಸಮಯದ ಬಳಿಕ ಸ್ಥಳದಲ್ಲಿ ನೋಡಿದಾಗ ಚಾಕು ಇರಲಿಲ್ಲ. ಆದರೆ, ಹಾವು ಮಾತ್ರ ಏನೋ ತಿಂದು ವಿಶ್ರಾಂತ ಸ್ಥಿತಿಯಲ್ಲಿರುವಂತೆ ಕಂಡುಬಂದಿತ್ತು.
ಬಳಿಕ ಹಾವು ಹೋಗಲಿ ಎಂದು ಕೆಲ ಹೊತ್ತು ಸಮಯ ಕಾದರೂ, ಅದು ಕದಲಿರಲಿಲ್ಲ. ಚಾಕು ಇಲ್ಲದಿರುವುದನ್ನು ನೋಡಿ ಅನುಮಾನಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದೆವು ಎಂದು ಗೋವಿಂದ ನಾಯಕ್ ಅವರು ಹೇಳಿದ್ದಾರೆ.
ಇನ್ನು ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದು ಪರಿಶೀಲಿಸಿದ ಪವನ್ ಅವರು, ಹಾವು ಚಾಕು ನುಂಗಿರುವುದನ್ನು ಖಚಿತಪಡಿಸಿಕೊಂಡರು. ಒಂದು ಅಡಿ 2 ಇಂಚು ಉದ್ದ ಇದ್ದ ಚಾಕುವಿನ ತುದಿ ಹಾವಿನ ಎದೆಯ ಹತ್ತಿರ ಸಿಲುಕಿತ್ತು. ಅದನ್ನು ಹೊರಹಾಕಲು ಹಾವು ಒಡ್ಡಾಡುತ್ತಿರುವುದು ಕಂಡುಬಂದಿತ್ತು.
ಹೇಗಾದರೂ ಮಾಡಿ ಆ ಚಾಕು ಹೊರತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ತಿಳಿದ ಪವನ್ ಅವರು, ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ಹಾವನ್ನು ಕೊಂಡೊಯ್ದುರು.
ಪವನ್ ಅವರು ಹಾವಿನ ಬಾಯಿ ತೆರೆದಿದ್ದು, ಅದ್ವೈತ ಭಟ್ ಅವರು ಫೋರ್ಸೆಪ್ಸ್ ಮೂಲಕ ಚಾಕುವನ್ನು ಹೊರತೆಗೆಯಲು ಮುಂದಾದರು. ಇದರಂತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ಮೂಲಕ ಚಾಕುವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ಹಾವು ತೀವ್ರತರವಾಗಿ ಗಾಯಗೊಂಡಿಲ್ಲ. ಆದರೆ, ಸಣ್ಣಪುಟ್ಟ ಗಾಯಗಳಾಗಿವೆ. ಆ ಗಾಯ ತಾನಾಗಿಯೇ ಗುಣಮುಖವಾಗಲಿದೆ. ಇದೀಗ ಹಾವನ್ನು ಕಾಡಿಗೆ ಬಿಡಲಾಗಿದೆ ಎಂದು ಪವನ್ ಅವರು ಹೇಳಿದ್ದಾರೆ.
ಇದೊಂದು ನಿಜಕ್ಕೂ ವಿಚಿತ್ರ ಘಟನೆಯಾಗಿದೆ. ಈ ರೀತಿಯ ಘಟನೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದು ನನಗೂ ಆಶ್ಚರ್ಯ ತರಿಸಿದೆ. ಈ ಪ್ರಬೇಧದ ಹಾವು ಲಕ್ಷಾಂತರ ವರ್ಷಗಳಿಂದ ವಿಕಸನಗೊಂಡಿರುವುದರಿಂದ, ಅವುಗಳ ಜೀರ್ಣಾಂಗಗಳು ನಿರಂತರವಾಗಿ ಬದಲಾಗುತ್ತಿವೆ ಮತ್ತು ಹೊಂದಿಕೊಳ್ಳುತ್ತಿವೆ. ಈ ಹಾವುಗಳು ಸೇವನೆ ಮಾಡುವ ವಸ್ತುಗಳು, ಅವುಗಳ ಆಕಾರಕ್ಕೆ ಅನುಗುಣವಾಗಿ ಜೀರ್ಣಾಂಗವೀ ಬದಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement