ಯೋಗೇಶ್ ಗೌಡ ಕೊಲೆ ಪ್ರಕರಣ: ನ್ಯಾಯಾಧೀಶರ ಮುಂದೆ ವಿನಯ್ ಕುಲಕರ್ಣಿ ಶರಣು, ಮತ್ತೆ ಸಿಬಿಐ ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸಿತ್ತು.
Vinay Kulkarni
ವಿನಯ್ ಕುಲಕರ್ಣಿ
Updated on

ಬೆಂಗಳೂರು: 2016ರಲ್ಲಿ ನಡೆದ ಬಿಜೆಪಿ ನಾಯಕ ಯೋಗೇಶ್ ಗೌಡ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್‌ಬಿ) ಅಧ್ಯಕ್ಷ ವಿನಯ್ ಕುಲಕರ್ಣಿ ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಶರಣಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನು ಕೇಂದ್ರ ತನಿಖಾ ದಳದ (CBI) ವಶಕ್ಕೆ ನೀಡಿದೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ಅವರ ಮಾಲಿಕತ್ವದ ಜಿಮ್‌ನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಕುಲಕರ್ಣಿ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಕೈವಾಡದ ಬಗ್ಗೆ ಆರೋಪಿಸಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.

ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದ ನಂತರ, ಕುಲಕರ್ಣಿ ಅವರನ್ನು 2021ರ ಆಗಸ್ಟ್ 13ರಂದು ಬಿಡುಗಡೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸಬಾರದು ಎಂಬ ಷರತ್ತು ವಿಧಿಸಿತ್ತು. ಆದಾಗ್ಯೂ, ತಮ್ಮ ಕ್ಷೇತ್ರವನ್ನು ಪ್ರವೇಶಿಸದೆ, ವಿನಯ್ ಕುಲಕರ್ಣಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಉತ್ತಮ ಅಂತರದಿಂದ ಗೆದ್ದರು. ಅವರ ಪತ್ನಿ ಮತ್ತು ಮಗಳು ಅವರ ಪರವಾಗಿ ಪ್ರಚಾರ ಮಾಡಿದ್ದರು.

Vinay Kulkarni
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಮತ್ತೆ ಜೈಲು ಪಾಲು ಸಾಧ್ಯತೆ

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಮತ್ತು ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸಾಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಬಿಐ, ಅವರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿ, ಈ ಸಂಬಂಧ ಸಾಕ್ಷ್ಯಗಳೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮತ್ತು ಹಣದ ಆಮಿಷ ಒಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಿಬಿಐ ಸಲ್ಲಿಸಿದ ಅರ್ಜಿಯ ನಂತರ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸಿತ್ತು. ಅಲ್ಲದೆ, ಒಂದು ವಾರದೊಳಗೆ ಶರಣಾಗುವಂತೆ ಸೂಚಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, 'ಇದರಲ್ಲಿ ಅನೇಕ ಜನರ ಪಾತ್ರವಿದೆ... ಅದು ಸಮಸ್ಯೆ ಎಂದು ನಾನು ಹೇಳಲಾರೆ. ನ್ಯಾಯಾಲಯವು ಸಾಕ್ಷ್ಯಗಳೊಂದಿಗೆ ಮುಂದುವರಿಯುತ್ತದೆ ಮತ್ತು ಅದು ಸಾಕ್ಷ್ಯದ ಆಧಾರದ ಮೇಲೆ ತೀರ್ಪನ್ನು ನೀಡುತ್ತದೆ. ದೇವರು ಇದ್ದಾನೆ. ಎಲ್ಲರಿಗೂ ತಿಳಿದಿದೆ... ಜನರು ನನ್ನನ್ನು ಜೈಲಿನಲ್ಲಿ ಕೂರಿಸಬೇಕೆಂದು ಬಯಸುತ್ತಾರೆ' ಎಂದರು.

ಈಮಧ್ಯೆ, ಕಾಂಗ್ರೆಸ್‌ನ ರಾಜ್ಯ ಘಟಕವು ಈ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com