
ಬೆಂಗಳೂರು: ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಚಾಲಕನ ಮೇಲೆ ಮಹಿಳಾ ಟೆಕ್ಕಿಯೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ಶನಿವಾರ ನಡೆದಿದೆ.
ಬಿಎಂಟಿಸಿ ಬಸ್‌ನ ಚಾಲಕ ಅತಹರ್ ಹುಸೇನ್ (40) ಮೇಲೆ ಸಾಫ್ಟ್‌ವೇರ್ ಇಂಜಿನಿಯರ್ ಕಾವ್ಯ (30 ವರ್ಷ) ಎಂಬ ಮಹಿಳೆ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕೈಕೊಂಡರಹಳ್ಳಿ ಬಸ್‌ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡಿದ್ದ ಮಹಿಳೆ, ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದಾಳೆ. ಆದರೆ, ಸಂಚಾರ ದಟ್ಟಣೆ ಮತ್ತು ನಿಯಮಗಳ ಕಾರಣದಿಂದ ಚಾಲಕ ಬಸ್ ನಿಲ್ಲಿಸಿಲ್ಲ.
ನಂತರ ಮಹಿಳೆ ಹೊಟ್ಟೆನೋವಿನಿಂದ ಕಿರುಚಿಕೊಂಡು ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಚಾಲಕ, ಬಲಕ್ಕೆ ತಿರುವು ತೆಗೆದುಕೊಂಡು ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಕಾವ್ಯ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಶುರು ಮಾಡಿದ್ದಾರೆ. ಈ ವೇಳೆ ಚಾಲಕ ಅಸಭ್ಯ ಭಾಶಣೆ ಬಳಸದಂತೆ ಹಾಗೂ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಮಹಿಳೆ ಚಾಲನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯಿಂದ ಆಘಾತಗೊಂಡ ಚಾಲಕ, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾವ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು ಮಹಿಳೆಯನ್ನು ಬಂಧನಕ್ಕೊಳಪಡಿಸಿದ್ದು, ಕ್ಷಮೆಯಾಚಿಸಿದ ಬಳಿಕ ಬಿಡುಗಡೆ ಮಾಡಿದ್ದಾರಂದು ತಿಳಿದುಬಂದಿದೆ.
Advertisement