ಬೆಂಗಳೂರಿನಲ್ಲಿರುವ ಅನಿವಾಸಿ ಭಾರತೀಯ (ಎನ್‌ಆರ್‌ಐ) ವೇದಿಕೆಯು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಇರಾನ್ ರಾಜಧಾನಿ ಟೆಹ್ರಾನ್ ಬಳಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಕರ್ನಾಟಕದ ಒಂಬತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಮಧ್ಯೆ ಇಸ್ರೇಲ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರೊಂದಿಗೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿ, ರಕ್ಷಣೆಯ ಭರವಸೆ ನೀಡಿದರು. ಇಸ್ರೇಲ್‌ನಲ್ಲಿ ಸಿಲುಕಿರುವ ಹಲವಾರು ಕನ್ನಡಿಗರೊಂದಿಗೆ ವೀಡಿಯೋ ಕರೆ ಮಾಡಿದ ಕುಮಾರಸ್ವಾಮಿಯವರು, ಅವರ ಕ್ಷೇಮ, ಸುರಕ್ಷತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಕೇಂದ್ರ ಸರಕಾರದಿಂದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
ನಮ್ಮ ಸರ್ಕಾರದ ಮುಂಬರುವ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆಯು ಕೇಂದ್ರದ ಜಾತಿ ಗಣತಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ 16ನೇ ಜನಗಣತಿಯೊಂದಿಗೆ ಜಾತಿ ಗಣತಿಯನ್ನು 2027ರ ಮಾರ್ಚ್ 1ರಿಂದ ಆರಂಭಿಸುವುದಾಗಿ ಅಧಿಸೂಚನೆ ಹೊರಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರ ಸರ್ಕಾರ ಜನಗಣತಿಯನ್ನು 2027 ರಿಂದ ಕೈಗೊಳ್ಳುತ್ತಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡುವುದಾಗಿ ಎಲ್ಲೂ ಹೇಳಿಲ್ಲ. ನಾವು ಮಾಡುತ್ತಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಅದರ ಜೊತೆ ಜಾತಿ ಗಣತಿಯೂ ಒಳಗೊಂಡಿದೆ ಎಂದು ಹೇಳಿದರು. ಅಲ್ಲದೆ ರಾಜ್ಯದ ಈ ಉಪಕ್ರಮವು ಸಾಮಾಜಿಕ ನ್ಯಾಯ ಒದಗಿಸುತ್ತದೆ ಎಂದು ಒತ್ತಿ ಹೇಳಿದರು.
Rapido ಬೈಕ್ ಸವಾರ ಸುಹಾಸ್ ಎಂಬಾತ ಮಹಿಳಾ ಪ್ರಯಾಣಿಕಳಿಗೆ ರಸ್ತೆ ಮಧ್ಯೆಯೇ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿನ್ನದಂಗಡಿಯಲ್ಲಿ ಕೆಲಸ ಮಾಡುವ ಮಹಿಳೆ Rapido ಬೈಕ್ ಬುಕ್ ಮಾಡಿದ್ದಳು. ಬೈಕ್ ಸವಾರನ ಅತಿವೇಗದ ಚಾಲನೆ ವಿರುದ್ಧ ಆರೋಪಿಸಿದ ಮಹಿಳೆ ಪ್ರಯಾಣವನ್ನು ಅರ್ಧದಲ್ಲೇ ಕೊನೆಗೊಳಿಸಲು ಆಯ್ಕೆ ಮಾಡಿದ್ದಳು. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ಮತ್ತು ಮಹಿಳೆ ಮಧ್ಯೆ ವಾಗ್ವಾದ ನಡೆದು, ಆ ವೇಳೆ ಸವಾರ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಹೈಕೋರ್ಟ್ ಆದೇಶದಂತೆ ಇಂದಿನಿಂದ ಬೈಕ್ ಟ್ಯಾಕ್ಸಿ ರದ್ದಾಗಬೇಕಿತ್ತು. ಆದರೂ ಸವಾರರು ಬೈಕ್ ಟ್ಯಾಕ್ಸಿಯನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ.
ಹೆಚ್ಚುತ್ತಿರುವ ಸಾರ್ವಜನಿಕರ ಒತ್ತಡ, ಕಾನೂನು ದೂರುಗಳು ಮತ್ತು ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣದ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಟನೆಗಳಿಗೆ ಸ್ಪಂದಿಸಿದ ಬಿಬಿಎಂಪಿ ಅಂತಿಮವಾಗಿ ತನ್ನ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧ ನಿರ್ಣಾಯಕ ಶಿಸ್ತುಕ್ರಮವನ್ನು ಪ್ರಾರಂಭಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಯಲಹಂಕ ವಲಯದ 13 ಕಟ್ಟಡದ 'ಅನಧಿಕೃತ ಪ್ಲೋರ್' ಗಳನ್ನು ಬಿಬಿಎಂಪಿ ಎಂಜಿನಿಯರ್‌ಗಳು ನೆಲಸಮಗೊಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಕೆಂಪೇಗೌಡ, ಚೌಡೇಶ್ವರಿ, ಅತ್ತೂರು, ಯಲಹಂಕ ನ್ಯೂ ಟೌನ್ ವಾರ್ಡ್‌ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಯಲಹಂಕ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸುಧಾಕರ್ ಖಚಿತಪಡಿಸಿದರು.
ನೆಲಮಂಗಲದ ಕುಣಿಗಲ್ ಬೈಪಾಸ್ನಲ್ಲಿ ಇಂದು ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಡ್ಯಾನ್ಸರ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್ ಮತ್ತು ಸಹನಾ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಲಾರಿ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪ್ರಜ್ವಲ್ ಕೆಲವು ಸಿನಿಮಾ ಮತ್ತು ಇವೆಂಟ್ಗಳಲ್ಲಿ ನೃತ್ಯ ಮಾಡಿದ್ದಾರೆ. ಸಹನಾ ಕೂಡ ಡ್ಯಾನ್ಸರ್ ಆಗಿದ್ದಾರೆ. ಇಬ್ಬರು ಮದುವೆ ಇವೆಂಟ್ ಒಂದನ್ನು ಮುಗಿಸಿಕೊಂಡು ಕುಣಿಗಲ್ನಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
Advertisement