
ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಸೇರ್ಪಡೆ ಅತ್ಯಂತ ಅವಶ್ಯಕವಾಗಿದೆ. ಈ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ "ವಿಶ್ವ ಪರಿಸರ ದಿನಾಚರಣೆ - 2025" ನ್ನು ಉದ್ಘಾಟಿಸಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದ ಮುಖ್ಯಮಂತ್ರಿ, ಪರಿಸರ ಸಂರಕ್ಷಣೆ, ಅದರ ಬಗೆಗಿನ ಜ್ಞಾನ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ" ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯವಾಗಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕಾಗುತ್ತದೆ. ಪರಿಸರ ಶುದ್ಧವಾಗಿದ್ದರೆ ಜನರು ಆರೋಗ್ಯ, ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಪ್ರಕೃತಿ ಮನುಷ್ಯನ ಆಸೆಗಳನ್ನು ಈಡೇರಿಸುತ್ತದೆ. ಆದರೆ ದುರಾಸೆಗಳನ್ನಲ್ಲ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ, ವೈವಿಧ್ಯಮಯ ಕಾಡು, ನದಿಗಳು, ಜೀವ ಸಂಪತ್ತನ್ನು ನಾವು ಕಾಪಾಡಬೇಕು. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಇಂದು ಬೋಧಿಸಲಾಗಿರುವ ಪ್ರತಿಜ್ಞಾ ವಿಧಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ದಿನಕ್ಕೆ 900 ಟನ್ ತ್ಯಾಜ್ಯ ಉತ್ಪಾದನೆ: ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ 900 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. 1.50 ಕೋಟಿ ಜನಸಂಖ್ಯೆಯನ್ನು ಬೆಂಗಳೂರು ಹೊಂದಿದೆ. ಜನಸಂಖ್ಯೆ ಬೆಳೆದಷ್ಟು ಪರಿಸರದ ಮೇಲೆ ಹಾನಿ ಉಂಟಾಗುತ್ತಿದೆ. ದೇಶ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿದೆ. ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಪರಿಸರ ಕುರಿತು ಜ್ಞಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಭೂಮಿಯಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಇದನ್ನು ಹೀಗೇ ಬಿಟ್ಟರೆ ಕರ್ನಾಟಕ ಮುಂದೆ ಮರುಭೂಮಿಯಾಗಲಿದೆ. ಅದಕ್ಕಾಗಿ ನಾವು ಈಗಲೇ ಎಚ್ಚರಿಕೆ ವಹಿಸಲೇಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು.
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ನಾವಿಂದು ಪ್ಲಾಸ್ಟಿಕ್ ಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದು ಹೇಳಿದರು.
ಪುನರ್ಬಳಕೆ ಮತ್ತು ಮರುಬಳಕೆ ಪ್ರೋತ್ಸಾಹಿಸಿ, ಏಕ ಬಳಕೆ ಪ್ಲಾಸ್ಟಿಕ್ ನಿಲ್ಲಿಸೋಣ, ಸಾರ್ವಜನಿಕ ಸಾರಿಗೆ ಉಪಯೋಗಿಸೋಣ, ಹತ್ತಿರದ ಸ್ಥಳಗಳಿಗೆ ನಡೆದು ಹೋಗುವ ಅಥವಾ ಸೈಕಲ್ ಬಳಕೆ ಮಾಡೋಣ, ಹನಿ ಹನಿ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳೋಣ, ನೀರನ್ನು ಪೋಲು ಮಾಡದೇ ಜವಾಬ್ದಾರಿಯುತವಾಗಿ ಬಳಸೋಣ. ಸಾಧ್ಯವಾದ ಮಟ್ಟಿಗೆ ಇದು ಪ್ರತಿಯೊಬ್ಬರ ಕರ್ತವ್ಯ ಎಂದು ಅರಿತು 'ನನ್ನ ಜೀವ ನನ್ನ ಮರ' ಎಂದು ಗಿಡ ಮರಗಳನ್ನು ನೆಟ್ಟು ಬೆಳೆಸೋಣ. ಪರಿಸರ ನ್ಯಾಯ, ಸುಸ್ಥಿರ ಬದ್ಧತೆಗೆ ಸಂಪೂರ್ಣ ಒಪ್ಪಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
Advertisement