ಬೆಂಗಳೂರಿಗರ ಮನೆ ಬಾಗಿಲಿಗೇ ಇ-ಖಾತಾ ವಿತರಣೆ: ಜುಲೈ 1ರಿಂದ ಆಂದೋಲನ ಆರಂಭ

ಇ-ಖಾತಾ ವಿತರಣೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1 ರಿಂದ 25,000 ಇ-ಖಾತಾಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು.
DK Shivkumar
ಡಿಕೆ.ಶಿವಕುಮಾರ್
Updated on

ಬೆಂಗಳೂರು: ರಾಜ್ಯ ಸರ್ಕಾರವು ಭರವಸೆ ನೀಡಿದಂತೆ ಆಸ್ತಿ ಮಾಲೀಕರಿಗೆ ಅವರ ಮನೆ ಬಾಗಿಲಿಗೆ ಇ-ಖಾತಾಗಳನ್ನು ತಲುಪಿಸಲಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಖಾತಾ ವಿತರಣೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1 ರಿಂದ 25,000 ಇ-ಖಾತಾಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಆಸ್ತಿಗಳ ಇ - ಖಾತಾ ದಾಖಲೆ ವಿತರಣೆ ಆಂದೋಲನ ನಡೆಸಲಾಗುವುದು. 'ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿದ್ದು, ಈ ಪೈಕಿ 5 ಲಕ್ಷ ಆಸ್ತಿಗಳ ಮಾಲೀಕರಷ್ಟೇ ಅಂತಿಮ ಇ-ಖಾತಾಗೆ ಅರ್ಜಿ ಸಲ್ಲಿಸಿದ್ದಾರೆ. ಆಸ್ತಿ ಮಾಲೀಕರು ಜಾಗೃತರಾಗಿ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆದುಕೊಳ್ಳಬೇಕು. ಒಂದು ತಿಂಗಳ ಕಾಲ ಇ-ಖಾತಾ ವಿತರಣೆ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ಕುರಿತು ಮನೆ ಮನೆ ಪ್ರಚಾರ ಹಾಗೂ ಜಾಹೀರಾತಿನ ಮೂಲಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.

ಬಿ -ಖಾತಾ ಆಸ್ತಿಗಳಿಗೆ 'ಎ' ಖಾತೆ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕಾನೂನು ಆಯಾಮಗಳ ಬಗ್ಗೆ ಪರಾಮರ್ಶಿಸಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆಗಳನ್ನು ರಚಿಸಬೇಕೆಂಬುದರ ಕುರಿತು ಕಾಂಗ್ರೆಸ್‌ ಪಕ್ಷದ ಎಲ್ಲ ಶಾಸಕರೊಂದಿಗೆ ಚರ್ಚಿಸಲಾಗಿದೆ. ಇನ್ನು ಪ್ರತಿಪಕ್ಷ ನಾಯಕರೊಂದಿಗೆ ಚರ್ಚಿಸುವುದು ಬಾಕಿ ಇದೆ. ಅವರನ್ನು ವಿಶ್ವಾಸಕ್ಕೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ವಿಚಾರ ಕುರಿತು ಕುರಿತು ಮಾತನಾಡಿ, ಸ್ವಚ್ಛ ಬೆಂಗಳೂರು ಉಪಕ್ರಮದ ಅಡಿಯಲ್ಲಿ, ಬಿಬಿಎಂಪಿ ಕಸವನ್ನು ತೆರವುಗೊಳಿಸಲು ಸಹಾಯ ಮಾಡಲು ಸಹಾಯವಾಣಿಯನ್ನು ಸ್ಥಾಪಿಸಿದೆ.

ಜನರು ಪಾದಚಾರಿ ಮಾರ್ಗಗಳು ಅಥವಾ ಇತರ ಸ್ಥಳಗಳಲ್ಲಿ ಸುರಿಯಲಾದ ಕಸದ ಫೋಟೋಗಳನ್ನು ತೆಗೆದು ಈ ಸಂಖ್ಯೆಗೆ ಕಳುಹಿಸಬಹುದು. ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆ ಗುಂಡಿ ವಿಚಾರ ಕುರಿತು ಮಾತನಾಡಿ, ಶಾಸಕರಿಗೆ ಹಣವನ್ನು ಮಂಜೂರು ಮಾಡಲಾಗಿದೆ, ನಗರದಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಕಾಮಗಾರಿ ಗುಣಮಟ್ಟವನ್ನು ನಾನು ತಪಾಸಣೆ ಮಾಡಿದ್ದೇನೆ. ಕೆಲವು ಕಡೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com