
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಇನ್ನು ಕೆಲವೇ ತಿಂಗಳುಗಳಲ್ಲಿ ಚಿಂಪಾಜಿ, ಚೀತಾ, ಜಾಗ್ವಾರ್ ಸೇರಿದಂತೆ 10 ವಿದೇಶಿ ವನ್ಯಜೀವಿಗಳ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಿಂದ ವರ್ಚುಯಲ್ ಮೂಲಕ ಚಾಲನೆ ನೀಡಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿದರು.
ಮುಂಬರುವ ತಿಂಗಳಲ್ಲಿ ಜಾಗ್ವಾರ್, ಚಿಂಪಾಂಜಿ, ಕ್ಯಾಪಚೀನ್ ಕೋತಿ ಸೇರಿ 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸೇರ್ಪಡೆಯಾಗಲಿದೆ, ಜೊತೆಗೆ ಬೃಹತ್ ಮತ್ಸ್ಯಾಗಾರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮುಂದಿನ ನಾಲೈದು ತಿಂಗಳಲ್ಲಿ ಹಂಟಿಂಗ್ ಚೀತಾ, ಕ್ಯಾಪಚಿನ್ ಕೋತಿಯನ್ನು ದಕ್ಷಿಣ ಅಮೇರಿಕದಿಂದ ವಿನಿಮಯ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ (ಉತ್ತರ ಅಮೆರಿಕ ಸಿಂಹ) ಸೇರಿ ಒಟ್ಟು 10 ವಿದೇಶಿ ವನ್ಯಜೀವಿಗಳು ಬನ್ನೇರುಘಟ್ಟಕ್ಕೆ ಆಗಮಿಸಲಿವೆ ಎಂದು ತಿಳಿಸಿದರು.
ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನಗಳನ್ನು ಬಳಸು ತಿರುವುದರಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸಲು ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಶದಲ್ಲೇ ಪ್ರಾಯೊಗಿಕವಾಗಿ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ ಎಂದರು.
ವಿದ್ಯುತ್ ಚಾಲಿತ ಬಸ್, 22 ಆಸನಗಳನ್ನು ಹೊಂದಿದ್ದು, 100 ಕೆ.ವಿ. ಬ್ಯಾಟರಿ ಸಾಮರ್ಥ್ಯದ್ದಾಗಿದೆ. 2 ಗಂಟೆ ಚಾರ್ಜ್ ಮಾಡಿದರೆ 160 ಕಿ.ಮೀ. ಅಂದರೆ ಎಂಟು ಟ್ರಿಪ್ ಸಂಚರಿಸಲಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027ರೊಳಗೆ ಬನ್ನೇರುಘಟ್ಟ ಉದ್ಯಾನವನ್ನು ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು. ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ವಾರಾಂತ್ಯದಲ್ಲಿ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.
ಉದ್ಯಾನಕ್ಕೆ ಮತ್ತೊಂದು ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಮತ್ಸ್ಯಾಗಾರವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಕಳೆದ ಮೇನಲ್ಲಿ ಉದ್ಯಾನವನಕ್ಕೆ ಸುಮಾರು 2.85 ಲಕ್ಷ ಪ್ರವಾಸಿಗರು ಆಗಮಿಸಿದ್ದು, ಇದು ದಾಖಲೆಯಾಗಿದೆ. ಚಿರತೆ ಸಫಾರಿ ಈಗ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದರು.
ಇತ್ತೀಚೆಗೆ ಬನ್ನೇರುಘಟ್ಟ ಉದ್ಯಾ ನದಲ್ಲಿ ಜೀಬ್ರಾ ಮತ್ತು ನೀಲಗಾಯ್ ಸಾವಿಗೀಡಾಗಿರುವ ಬಗ್ಗೆ ಸಿಸಿಎಫ್ ಅವರಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮೃ ಗಾಲಯದಲ್ಲಿ ಮತ್ತು ಜೈವಿಕ ವನದಲ್ಲಿ ಯಾವುದೇ ವನ್ಯ ಜೀವಿ ಅಸಹಜವಾಗಿ ಸಾವಿಗಿಡಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ನೂತನವಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಬರುವ ಡಿಸೆಂಬರ್ ಹೊತ್ತಿಗೆ ಸಿದ್ಧವಾಗಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
Advertisement