
ಬೆಂಗಳೂರು: ವಿಮಾನ ಸಿಬ್ಬಂದಿ ಜೊತೆಗೆ ಅನುಚಿತ ವರ್ತನೆ ತೋರಿದ ಹಾಗೂ ವಿಮಾನ ಪತನಗೊಳಿಸುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ)ವೈದ್ಯೆಯೊಬ್ಬರನ್ನು ಏರ್ ಇಂಡಿಯಾ ವಿಮಾನದಿಂದ ಕೆಳಗಿಳಿಸಿದ ಘಟನೆ ಗುರುವಾರ ನಡೆದಿದೆ.
ವೈದ್ಯೆ ಮೋಹನ್‌ಭಾಯಿ (36) ಎಂಬುವವರು ಬ್ಯಾಗ್ ಅನ್ನು ಸೀಟಿನ ಮೇಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲು ನಿರಾಕರಿಸಿದ್ದಲ್ಲದೆ, ವಿಮಾನದ ಸಿಬ್ಬಂದಿಯನ್ನು ನಿಂದಿಸಿ, ವಿಮಾನವನ್ನು ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಐಎಯ ಭದ್ರತಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಅಗ್ನಿಮಿತ್ರ ಬಹಿನಿಪತಿ (39) ಮಂಗಳವಾರ ಸಂಜೆ 6.30 ರ ಸುಮಾರಿಗೆ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ ಮಹಿಳೆಗೆ ಜಾಮೀನು ನೀಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಸೂರತ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಅನುಚಿತ ವರ್ತನೆಯಿಂದಾಗಿ ಇತರೆ ಪ್ರಯಾಣಿಕರು 2 ಗಂಟೆಗಳ ವಿಳಂಬವನ್ನು ಎದುರಿಸಬೇಕಾಯಿತು.
ಆಗಿದ್ದೇನು...?
ಏರ್ ಇಂಡಿಯಾದ IX2749 ವಿಮಾನದಲ್ಲಿ ಮೋಹನ್ ಭಾಯಿ ಪ್ರಯಾಣಿಸಲು ಸಿದ್ದರಾಗಿದ್ದರು. ಆಯುರ್ವೇದ ವೈದ್ಯೆಯಾದ ಮೋಹನ್‌ಭಾಯಿ ಚೆಕ್-ಇನ್ ಕೌಂಟರ್ ಅನ್ನು ದಾಟಿದ್ದರು. ಎರಡು ಬ್ಯಾಗ್‌ಗಳನ್ನು ವಿಮಾನದಲ್ಲಿ ಕೊಂಡೊಯ್ಯಲು ಪಟ್ಟು ಹಿಡಿದಿದ್ದರು.
ಬಳಿಕ ವಿಮಾನದಲ್ಲಿ ಹತ್ತಿದ ನಂತರ, ಒಂದು ಬ್ಯಾಗ್ ಅನ್ನು ಸಿಬ್ಬಂದಿ ಕ್ಯಾಬಿನ್ ಬಳಿ ಇಟ್ಟಿದ್ದು, ಮತ್ತೊಂದು ಬ್ಯಾಗ್ ಅನ್ನು ತನ್ನ ಸೀಟ್ 20F ಗೆ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ. ಬ್ಯಾಗ್ ಅನ್ನು ತನ್ನ ಸೀಟಿನ ಮೇಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಇಡಲು ಸಿಬ್ಬಂದಿ ಮನವಿ ಮಾಡಿದ್ದಾರೆ.
ಆದರೆ, ಮಹಿಳೆ ಇದಕ್ಕೆ ನಿರಾಕರಿಸಿದ್ದು, ಬ್ಯಾಗ್ ಅನ್ನು ಅವರ ಬಳಿಯೇ ಇಟ್ಟುಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಸಿಬ್ಬಂದಿ ಮತ್ತು ನಂತರ ಕ್ಯಾಪ್ಟನ್ ಬಾರಿ ಬಾರಿ ಕೇಳಿದರೂ ಮೋಹನ್‌ಭಾಯಿ ಒಪ್ಪದೆ, ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಇತರ ಪ್ರಯಾಣಿಕರು ಆಕೆಗೆ ಸಮಾಧಾನ ಮಾಡಲು ಪ್ರಯತ್ನಿಸಿದರೂ, ಅವರ ಮೇಲೂ ಕೂಗಾಡಿದ್ದಾರೆನ್ನಲಾಗಿದೆ. ಅಲ್ಲದೆ, ಬ್ಯಾಗ್'ನ್ನು ಬದಿಗೆ ಸರಿಸಿದರೆ ವಿಮಾನ ಪತನಗೊಳ್ಳುವಂತೆ ಮಾಡುತ್ತೇನೆಂದೂ ಬೆದರಿಸಿದ್ದಾರೆಂದು ಹೇಳಲಾಗುತ್ತಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕ್ಯಾಪ್ಟನ್ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ CISF ಸಿಬ್ಬಂದಿ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.
Advertisement