
ಮಂಗಳೂರು: ಸೀಮಂತದ ದಿನ ನಿಗದಿಯಾಗಿದ್ದ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗಂಡನ ಮೃತದೇಹ ಪತ್ತೆ ಆಗಿರುವ ಘಟನೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ.
ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ರಾಮ ಮೂಲ್ಯ (52) ಹಾಗೂ ಅವರ ಪತ್ನಿ ಜಯಂತಿ (45) ಮೃತರು. ಅವರು ಕಳೆದ ಕೆಲವು ವರ್ಷಗಳಿಂದ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ಪತ್ನಿಯ ಮನೆಯಲ್ಲೇ ಸಂಸಾರ ನಡೆಸುತ್ತಿದ್ದರು.
ಗುರುವಾರ ಬೆಳಗ್ಗೆ ಪಕ್ಕದ ಮನೆಯವರು ತಿಮ್ಮಪ್ಪ ರಾಮ ಮೂಲ್ಯ ಅವರ ಮನೆಯಿಂದ ಯಾರೂ ಹೊರಬಾರದಿದ್ದುದನ್ನು ಗಮನಿಸಿ ಮನೆಗೆ ಹೋಗಿ ನೋಡಿದಾಗ ಮನೆಯ ಬಾಗಿಲು ತೆರೆದೇ ಇತ್ತು. ಒಳ ನೋಡಿದಾಗ ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದರೆ, ತಿಮ್ಮಪ್ಪ ನೇಣು ಬಿಗಿದುಕೊಂಡಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಜಗಳ ವಿಕೋಪಕ್ಕೆ ತಿರುಗಿ ಜಯಂತಿ ಅವರಿಗೆ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಂದಿದ್ದು, ನಂತರ ತಿಮ್ಮಪ್ಪ ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತ ಜಯಂತಿ ಅವರ ತಂಗಿ ಸುಜಾತ ಫರಂಗಿಪೇಟೆ ಮತ್ತು ತಿಮ್ಮಪ್ಪರ ಸಹೋದರ ವಿಶ್ವನಾಥ ಅವರ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಗುಂಡಿಯ ನಿವಾಸಿ ಜಯಂತಿ ಮತ್ತು ಮಿತ್ತಮಜಲು ನಿವಾಸಿ ತಿಮ್ಮಪ್ಪ ಮದುವೆಯಾಗಿ 15 ವರ್ಷಗಳಾಗಿತ್ತು, 15 ವರ್ಷದ ನಂತರ ಜಯಂತಿ ಗರ್ಭಿಣಿಯಾಗಿದ್ದರು. ಜುಲೈ 2 ರಂದು ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
Advertisement