
ಬೆಂಗಳೂರು: ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಕಲಾಸಿಪಾಳ್ಯದ ಅರುಣ್ (27) ಮತ್ತು ಜೆ.ಜೆ.ನಗರ ಸಮೀಪದ ಜನತಾ ಕಾಲೊನಿಯ ದೀಪು (28) ಬಂಧಿತರು.
ಇಬ್ಬರು ಆರೋಪಿಗಳು ಜೂ.14ರ ರಾತ್ರಿ ಜನತಾ ಕಾಲೊನಿಯಲ್ಲಿ ರೌಡಿ ಶೀಟರ್ ವಿಜಯ್ (26) ಎಂಬಾತನ ಮೇಲೆ ಚಾಕುವಿ ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಆರೋಪಿಗಳಾದ ಅರುಣ್ ಮತ್ತು ದೀಪು ರಾಜರಾಜೇಶ್ವರಿನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಮೇರೆಗೆ ಇನ್ಸ್‌ಪೆ ಕ್ಟರ್ ಕೆಂಪೇಗೌಡ ನೇತೃತ್ವದ ಪೊಲೀಸರ ತಂಡ ಭಾನುವಾರ ಮಧ್ಯಾಹ್ನ ಅಲ್ಲಿಗೆ ತೆರಳಿದೆ. ಈ ವೇಳೆ ಆರೋಪಿಗಳು ಇನ್ಸ್‌ಪೆಕ್ಟರ್ ಕೆಂಪೇಗೌಡ ಮತ್ತು ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಇನ್ಸ್‌ಪೆಕ್ಟರ್ ಕೆಂಪೇಗೌಡ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಕೆಂಪೇಗೌಡ ಹಾಗೂ ಪಿಎಸ್‌ಐ ಪದ್ಮನಾಭ ಅವರು ಆರೋ ಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡು ಕುಸಿದು ಬಿದ್ದ ಇಬ್ಬರು ಆರೋಪಿ ಗಳನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳ ದಾಳಿಗೆ ಜೆ.ಜೆ.ನಗರ ಠಾಣೆಯ ಎಎಸ್‌ಐ ಕುಮಾರ್ ಮತ್ತು ಕಾನ್ಸ್‌ಟೇಬಲ್ ಕರೀಂ ಸಾಬ್ ಗಾಯಗೊಂಡಿದ್ದಾರೆ.
ಇನ್ನು ಹತ್ಯೆಯಾದ ರೌಡಿ ಶೀಟರ್ ವಿಜಯ್ ತಮಿಳುನಾಡು ಮೂಲದವನಾಗಿದ್ದು, ನಗರದ ಜನತಾ ಕಾಲೋನಿಯಲ್ಲಿ ನೆಲೆಸಿದ್ದ. ಸಿಟಿ ಮಾರ್ಕೆಟ್‌ನಲ್ಲಿ ಚಪ್ಪಲಿ ವ್ಯಾಪಾರ ಮಾಡುತ್ತಿದ್ದ. ಈತನ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕಾಟನ್ ಪೇಟೆ ಪೊಲೀಸರು ರೌಡಿ ಶೀಟ್ ತೆರೆದಿದ್ದರು.
ಮೂರು ತಿಂಗಳ ಹಿಂದೆ ವಿಜಯ್, ಆರೋಪಿ ಅರುಣ್‌ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಪ್ರಕರಣದಲ್ಲಿ ಪೊಲೀಸರು ವಿಜಯ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು 2 ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಈ ವಿಚಾರ ತಿಳಿದ ಅರುಣ್ ಶನಿವಾರ ರಾತ್ರಿ ತನ್ನ ಸಹಚರರೊಂದಿಗೆ ಜನತಾ ಕಾಲೋನಿಗೆ ಬಂದು ಮಾತನಾಡುವ ನೆಪದಲ್ಲಿ ವಿಜಯ್‌ನನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
Advertisement