
ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕನಸು ಕಂಡಿರುವ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ಸುರಂಗ ಮಾರ್ಗದಿಂದಾಗುವ ಪ್ರಯೋಜನಗಳನ್ನು ಭಾನುವಾರ ವಿವರಿಸಿದ್ದು, ಇದರ ಬೆನ್ನಲ್ಲೇ ನೆಟ್ಟಿಗರು ಉಪ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ನಿಮ್ಮ ಸಮಯ, ನಿಮ್ಮನ್ನು ಗಮನದಲ್ಲಿಟ್ಟುಕೊಂಡು ಸುರಂಗ ನಿರ್ಮಾಣ ಮಾಡುತ್ತಿದ್ದೇವೆ. ಹೆಬ್ಬಾಳ ಟು ಸಿಲ್ಕ್ ಬೋರ್ಡ್ 25ಕ್ಕೂ ಹೆಚ್ಚು ಅಡಚಣೆ ತಪ್ಪಿಸಬಹುದು. ದಿನಕ್ಕೆ 45ಕ್ಕೂ ಹೆಚ್ಚು ನಿಮಿಷ ಉಳಿಸಬಹುದು. 16.75 ಕಿ.ಮೀ ತಡೆರಹಿತ, ಸಿಗ್ನಲ್-ಮುಕ್ತವಾಗಿ ಪ್ರಯಾಣಿಸಬಹುದು. ಐಟಿ ಕಾರಿಡಾರ್‌ಗೆ ನೇರ ಪ್ರವೇಶ ಸಿಗಲಿದೆ. ವೇಗವಾದ ಸ್ಮಾರ್ಟ್ ಬೆಂಗಳೂರು ತನ್ನ ಹಾದಿಯಲ್ಲಿದೆ ಎಂದು ಹೇಳಿದ್ದರು.
ಉಪ ಮುಖ್ಯಮಂತ್ರಿಗಳು ಪೋಸ್ಟ್ ಮಾಡುತ್ತಿದ್ದಂತೆಯೇ ನೆಟ್ಟಿಗರು ಟೀಕಿಸಲು ಶುರು ಮಾಡಿದ್ದು, ಯೋಜನೆಯನ್ನು ವಾಸ್ತವದಿಂದ ದೂರವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ನಡೆಯನ್ನು ಟೀಕಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಸುರಂಗ ರಸ್ತೆ ಒಂದು ಅವೈಜ್ಞಾನಿಕ ಪರಿಹಾರ. ತೆರಿಗೆದಾರರ 18,000 ಕೋಟಿ ಹಣ ಖರ್ಚು ಮಾಡಿ ಯೋಜನೆ ವಿಫಲಗೊಳ್ಳುವುದು ಖಚಿತ ಎಂದು ಹೇಳಿದ್ದಾರೆ.
ಭರತನಾಡು ಎಂಬ ಎಕ್ಸ್ ಹ್ಯಾಂಡಲ್ ಪೋಸ್ಟ್ ಮಾಡಿ, ಸರ್ಕಾರದ ಈ ಯೋಜನೆ ಅವೈಜ್ಞಾನಿಕ, ದಿಕ್ಕಿಲ್ಲದ ಮತ್ತು ಅಸ್ತವ್ಯಸ್ತ ಬೆಂಗಳೂರು ಹಾದಿಯಲ್ಲಿದೆ ಎಂದು ಟೀಕಿಸಿದ್ದಾರೆ.
ನಾಗರಿಕ ಕಾರ್ಯಕರ್ತ ರಾಜ್‌ಕುಮಾರ್ ದುಗರ್ ಎಂಬುವವರು ಪೋಸ್ಟ್ ಮಾತನಾಡಿ, ಸುರಂಗ ರಸ್ತೆ ಯೋಜನೆಯನ್ನು ಮುಂದುವರೆಸುವುದಕ್ಕೂ ಮೊದಲು ಸರ್ಕಾರ ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಸುರಂಗ ರಸ್ತೆ ಯೋಜನೆಯನ್ನು (TRP) ಮುಂದುವರಿಸುವ ಮೊದಲು ನಾವು ಮುಕ್ತ ಮನಸ್ಸಿನಿಂದ ಪಾರದರ್ಶಕ, ನ್ಯಾಯಯುತ ಸಾರ್ವಜನಿಕ ಸಮಾಲೋಚನೆಗೆ ಅರ್ಹರು” ಎಂದು ಅವರು ಪೋಸ್ಟ್ ಮಾಡಿದ್ದಾರೆ,
ಸರ್ಕಾರ ಸುರಂಗ ಮಾರ್ಗಗಳ ಬದಲಿಗೆ “ನಡೆಯಲು, ಸೈಕಲ್ ಸವಾರಿ ಮಾಡಲು ಸಾರ್ವಜನಿಕ ಸಾರಿಗೆಗೆ ಯೋಗ್ಯವಾದ ರಸ್ತೆ ನಿರ್ಮಾಣ ಮಾಡಬೇಕು. ಒಳಚರಂಡಿ ಮತ್ತು ಸ್ವಚ್ಛತೆ ಯತ್ತ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ ಎಂಬ ಮತ್ತೊಬ್ಬ ವ್ಯಕ್ತಿ ಪೋಸ್ಟ್ ಮಾಡಿ, ಚುನಾಯಿತ ಪ್ರತಿನಿಧಿಗಳು ವಾಸ್ತವದಿಂದ ದೂರವಾದಾಗ, ತಮ್ಮನ್ನು ತಾವು ಶ್ರೀಮಂತರನ್ನಾಗಿಸಲು ಯೋಜನೆಗಳನ್ನು ರೂಪರಿಸುತ್ತಾರೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಾರೆ. ಸರ್ಕಾರ ಇಂತಹ ಯೋಜನೆಗಳ ಬದಲಿಗೆ ಮೆಟ್ರೋ ವಿಸ್ತರಣೆ ಮತ್ತು ಸಾಮೂಹಿಕ ಸಾರಿಗೆ ಹೂಡಿಕೆಗಳಿಗೆ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.
Advertisement