
ಬೆಂಗಳೂರು: ಮೆಟ್ರೋ ಶುಲ್ಕ ಸಮಿತಿ ವರದಿಯೇನೂ ರಾಷ್ಟ್ರೀಯ ಭದ್ರತಾ ದಾಖಲೆಯಲ್ಲ. ವರದಿಯನ್ನು ಸಾರ್ವಜನಿಕಗೊಳಿಸಿ ಎಂದು ಬಿಎಂಆರ್‌ಸಿಎಲ್‌ಗೆ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಮೆಟ್ರೋ ವ್ಯವಸ್ಥೆಯನ್ನು ಮಾಸ್ಕೋ ಮೆಟ್ರೋಗೆ ಹೋಲಿಸಿ, ಅಲ್ಲಿನ ಕಾರ್ಯಾಚರಣೆಯ ದಕ್ಷತೆ, ವಿನ್ಯಾಸ ಮತ್ತು ಕೈಗೆಟುಕುವಿಕೆ ದರವನ್ನು ಎತ್ತಿ ತೋರಿಸಿದರು.
ಮಾಸ್ಕೋ ಮೆಟ್ರೋ 80-ಸೆಕೆಂಡ್ ಆವರ್ತನದಲ್ಲಿ ಚಲಿಸುತ್ತದೆ, ದಟ್ಟವಾದ ರೇಡಿಯಲ್ ಮಾರ್ಗಗಳಿಂದ ನಗರದಲ್ಲಿ ಚಲಿಸತ್ತದೆ. ಅಲ್ಲಿನ ಪ್ರತಿ ನಿಲ್ದಾಣವು ಕಲಾಕೃತಿಯಿಂದ ಕೂಡಿದೆ.ಸಾರ್ವಜನಿಕ ಸಾರಿಗೆಯು ಕ್ರಿಯಾತ್ಮಕವಾಗಿರುವುದಕ್ಕಿಂತ ಹೆಚ್ಚಾಗಿರಬೇಕು. ಅದು ಮಹತ್ವಾಕಾಂಕ್ಷೆ, ಸೌಂದರ್ಯಶಾಸ್ತ್ರ ಮತ್ತು ಪ್ರಯಾಣಿಕರ ಮೇಲಿನ ಗೌರವವನ್ನು ಪ್ರತಿಬಿಂಬಿಸಬೇಕು. ಆದರೆ, ಅದು ಬೆಂಗಳೂರಿನಲ್ಲಿ ಕಾಣೆಯಾಗಿದೆ ಎಂದು ಹೇಳಿದ್ದಾರೆ.
ಬಳಿಕ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆಂದೂ ತಿಳಿಸಿದ್ದಾರೆ.
ವರದಿಯನ್ನೇಕೆ ನೀವು ಸಾರ್ವಜನಿಕಗೊಳಿಸುತ್ತಿಲ್ಲ? ಏನನ್ನು ಮರೆ ಮಾಡಲು ಬಯಸುತ್ತಿದ್ದೀರಿ? ವರದಿಯನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎನ್ನುವುದಕ್ಕೆ ಅದೇನು ರಾಷ್ಟ್ರೀಯ ಭದ್ರತೆಗೆ ಕುರಿತ ದಾಖಲೆಗಳಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮೆಟ್ರೋ ಶುಲ್ಕ ಹೆಚ್ಚಳವನ್ನು ಟೀಕಿಸಿದ ಅವರು, ನಗರ ಚಲನಶೀಲತೆಗೆ ಸಾರ್ವಜನಿಕ ಸಾರಿಗೆಯು ಅಗ್ಗದ ಮತ್ತು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿರಬೇಕು. ನಾವು ಅದನ್ನು ಒತ್ತಾಯಿಸಬೇಕಾಗಿದೆ ಎಂದು ಹೇಳಿದ್ದಾರೆ.
Advertisement