
ಬೆಂಗಳೂರು: ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡ ಜೊತೆಗಿನ ಹಣಕಾಸು ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ)ವು ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಸೋಮವಾರ ಸುಮಾರು ಆರು ಗಂಟೆಗಳ ವಿಚಾರಣೆ ನಡೆಸಿದ್ದು, ಬಳಿಕ ಮುಂದಿನ ಜು.8 ರಂದು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದೆ.
ಇಡಿ ಸುರೇಶ್ ಅವರನ್ನು ಜೂನ್ 19 ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಇಡಿ ಸೂಚಿಸಿತ್ತು. ಆದರೆ, ಪೂರ್ವ ನಿಗದಿತ ಕಾರ್ಯಕ್ರಮಗಳಿರುವುದರಿಂದ ಜೂನ್ 23 ರಂದು ವಿಚಾರಣೆಗೆ ಹಾಜರಾಗುವುದಾಗಿ ಡಿಕೆ.ಸುರೇಶ್ ಅವರು ಇಡಿಗೆ ತಿಳಿಸಿದ್ದರು.
ಇದರಂತೆ ನಿನ್ನೆ ಡಿಕೆ.ಸುರೇಶ್ ಅವರು ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ಅಧಿಕಾರಿಗಳು ಡಿಕೆ.ಸುರೇಶ್ ಅವರಿಗೆ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅವರು ಬೆಳಿಗ್ಗೆ 11.15 ರ ಸುಮಾರಿಗೆ ಹಾಜರಾಗಿದ್ದರು. ವಿಳಂಬದಿಂದಾಗಿ, ಸುರೇಶ್ ಅವರನ್ನು ರಿಜಿಸ್ಟರ್‌ಗೆ ಸಹಿ ಹಾಕುವಂತೆ ತಿಳಿಸಿ, ಸ್ವಲ್ಪ ಸಮಯದವರೆಗೆ ಹೊರಗೆ ಕಾಯುವಂತೆ ಮಾಡಿದರು ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಸುರೇಶ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದ ಮೂಲಗಳು ತಿಳಿಸಿವೆ.
ಇನ್ನು ವಿಚಾರಣೆ ವೇಳೆ ಐಶ್ವರ ಗೌಡ ಜತೆ ಯಾವುದೇ ವ್ಯವಹಾರ ಮಾಡಿಲ್ಲ. ಆಕೆಯ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸುರೇಶ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಕಳೆದ 3 ವರ್ಷಗಳ ಬ್ಯಾಂಕ್ ವಹಿವಾಟಿನ ವಿವರಗಳ ಸಮೇತ ಆಗಮಿಸಿದ್ದ ಸುರೇಶ್, ಎಲ್ಲವನ್ನೂ ಇ.ಡಿ ಅಧಿಕಾರಿಗಳಿಗೆ ತೋರಿಸಿದರು. ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದರು ಎನ್ನಲಾಗಿದೆ.
ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್ ಅವರು, ಬೆಳಗ್ಗೆ 11ರಿಂದ 6ರವರೆಗೆ ಇ.ಡಿ ವಿಚಾ ರಣೆ ಹಾಜರಾಗಿದ್ದೆ. ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದರು.
ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜತೆ ಪರಿಚಯ ಇದೆ ಎಂಬುದಾಗಿ ಹೇಳಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರು ಕೂಡ ವಿಚಾರಣೆ ವೇಳೆ ನನ್ನ ಹೆಸರು ಹೇಳಿ ಹಣ ಪಡೆದ ಬಗ್ಗೆ ದಾಖಲೆ ಕೊಟ್ಟಿದ್ದರು. ಈ ಬಗ್ಗೆ ಎಲ್ಲ ಪ್ರಶ್ನೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದರು.
ಐಶ್ವರ್ಯಗೌಡಗೂ ನನಗೂ ಪರಿಚಯ ಇರಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರಿಂದ ಹೋಗಿದ್ದೆ. ಅವರ ಯಾವುದೇ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ. ಮತ್ತೆ ಮುಂದಿನ ಜು.8ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು, ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್, "ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೂಡ ಈ ಹಿಂದೆ ಇಡಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರುತ್ತಿದೆ ಎಂದು ಹೇಳಿವೆ. ಅಂತಹ ಎಚ್ಚರಿಕೆಗಳನ್ನು ಇನ್ನೂ ನಿರ್ಲಕ್ಷಿಸಲಾಗುತ್ತಿದೆ. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯಾಗಿದೆ. ಇಡಿ ತನ್ನ ವ್ಯಾಪ್ತಿಯನ್ನು ಮೀರಿ ಪ್ರಕರಣಗಳನ್ನು ದಾಖಲಿಸುತ್ತಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ಇಡಿಯನ್ನು ಕೈಗೊಂಬೆಯಾಗಿ ಬಳಸುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದರು.
3.98 ಕೋಟಿ ಆಸ್ತಿ ಜಪ್ತಿ
ಈ ನಡುವೆ ಡಿ.ಕೆ.ಸುರೇಶ್ ಅವರ ಹೆಸರಿನಲ್ಲಿ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾಗೌಡ ಹಾಗೂ ಇತರ ಆರೋಪಿಗಳ 73.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
ಐಶ್ವರ್ಯಗೌಡಳ ಗ್ಯಾಂಗ್‌ಗೆ ಸೇರಿದ ಫ್ಲ್ಯಾಟ್‌ಗಳು, ಕಟ್ಟಡ ಹಾಗೂ ಜಮೀನು ಸೇರಿ 72.01 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ನಗದು ಹಣ ಮತ್ತು ವಾಹನಗಳು ಸೇರಿ 81.97 ಕೋಟಿ ಮೌಲ್ಯದ ಚರಾಸ್ತಿ ಸೇರಿ ಒಟ್ಟು ರೂ.3.98 ಕೋಟಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು 3.8 ಪ್ರಕಟಣೆಯಲ್ಲಿ ತಿಳಿಸಿದೆ.
ಮಾಜಿ ಸಂಸದ ಸುರೇಶ್ ಅವರ ಸೋದರಿ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯಗೌಡಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ವಂಚನೆ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಆಕೆಯನ್ನು ಇ.ಡಿ ಬಂಧಿಸಿತ್ತು.
Advertisement