
ಕಲಬುರಗಿ/ರಾಯಚೂರು: ಇರಾನ್ ಕೆಲವು ನಿರ್ಣಾಯಕ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ್ದು, ಕಚ್ಚಾ ತೈಲದ ಶೇಕಡಾ 50 ರಷ್ಟು ಇರಾನ್‌ನಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇರಾನ್-ಇಸ್ರೇಲ್ ಯುದ್ಧದಲ್ಲಿ ಭಾರತ ಸರ್ಕಾರ ಇರಾನ್ ರಾಷ್ಟ್ರವನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್ -ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಅಮೆರಿಕಾ ಇಸ್ರೇಲ್ ಪರ ಮಧ್ಯ ಪ್ರವೇಶಿಸಿ ಯುದ್ಧಕ್ಕೆ ಇಳಿದಿದೆ. ವಿಶ್ವದಾದ್ಯಂತ ಯುದ್ಧ ನಡೆದರೆ ಪ್ರಪಂಚದಲ್ಲಿ ಅಶಾಂತಿ ಸೃಷ್ಠಿಯಾಗುತ್ತದೆ. ಯುದ್ಧಬೇಡವೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಈಗಾಗಲೇ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ವಿಶ್ವ ಗುರು ಎಂದು ಪ್ರಚಾರ ಪಡೆಯುವ ದೇಶದ ಪ್ರಧಾನಿ ಮೋದಿಯವರು, ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡುವುದರಿಂದ ಹಾಗೂ ಅನೇಕ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆಂದು ಹೇಳಲಾಗುವುದರಿಂದ, ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಬೇಕೆಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ, ಮೋದಿ ಅಮೆರಿಕಕ್ಕೆ ಹೋಗಿ 'ಫಿರ್ ಏಕ್ ಬಾರ್ ಟ್ರಂಪ್ ಸರ್ಕಾರ್' ಎಂಬ ಘೋಷಣೆ ಕೂಗಿದ್ದರು. ಡೊನಾಲ್ಡ್ ಟ್ರಂಪ್ ಪರ ಮತ ಚಲಾಯಿಸುವಂತೆ ಭಾರತೀಯರನ್ನು ಒತ್ತಾಯಿಸಿದ್ದರು, ಆದರೆ, ಇದರ ಪ್ರತಿಯಾಗಿ, ಟ್ರಂಪ್ ಭಾರತಕ್ಕಾಗಿ ಏನನ್ನೂ ಮಾಡಿಲಿಲ್ಲ. ಹಲವಾರು ತೆರಿಗೆಗಳನ್ನು ಭಾರತಕ್ಕೇ ವಿಧಿಸಿದ್ದಾರೆಂದು ತಿಳಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಎಲ್ಲವೂ ಸರಿಯಾಗಿ ನಡೆಯಿತು. ದೇಶದ ಜನತೆ ಕೇಂದ್ರ ಸರಕಾರವನ್ನು ಬೆಂಬಲಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು. ಆದರೆ ಸರ್ವಪಕ್ಷ ಸಭೆ ಕರೆದು, ಕೇಂದ್ರ ಸರಕಾರದ ನಿಲುವು ಮತ್ತು ಮುಂದಿನ ಕ್ರಮಗಳು ಹಾಗೂ ಕೈಗೊಂಡಿರುವ ನಿರ್ಧಾರಗಳ ಕುರಿತು ಹೇಳುವ ನಿಟ್ಟಿನಲ್ಲಿ ಮೋದಿಯವರು ಸರ್ವ ಪಕ್ಷ ಸಭೆಗೆ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ಇದು ಅವರು ತೋರುವ ಅಹಂಕಾರವಾಗಿದೆ. ದೇಶದ ಪ್ರಧಾನಿ ಅಹಂಕಾರಿ ಎಂದು ಕಿಡಿಕಾರಿದರು.
Advertisement