
ನವದೆಹಲಿ: ಗಾಜಾ ಮತ್ತು ಇರಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿ ಬಗ್ಗೆ ಭಾರತ ವಹಿಸಿರುವ ಮೌನವನ್ನು "ಕೇವಲ ಧ್ವನಿಯ ನಷ್ಟವಲ್ಲ, ಮೌಲ್ಯಗಳ ಶರಣಾಗತಿ" ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
"It is still not too late for India's voice to be heard", ಎಂಬ ಲೇಖನದಲ್ಲಿ ಅವರು, ನರೇಂದ್ರ ಮೋದಿ ಸರ್ಕಾರವು ಇಸ್ರೇಲ್ ಜೊತೆಗೆ ಸ್ವತಂತ್ರ ಪ್ಯಾಲೆಸ್ತೇನ್ ನ್ನು ಕಲ್ಪಿಸಿಕೊಳ್ಳುವ ಶಾಂತಿಯುತ ದ್ವಿರಾಷ್ಟ್ರ ಪರಿಹಾರಕ್ಕೆ ಭಾರತದ ದೀರ್ಘಕಾಲೀನ ಮತ್ತು ತತ್ವಬದ್ಧ ಬದ್ಧತೆಯನ್ನು ಕೈಬಿಟ್ಟಿದೆ ಎಂದು ಆರೋಪಿಸಿದರು.
ಅಮೆರಿಕದ ಯುದ್ಧಗಳ ಬಗ್ಗೆ ಪ್ರಸ್ತಾಪಿಸಿರುವ ಸೋನಿಯಾ ಗಾಂಧಿ ಅವರು, ಪಶ್ಚಿಮ ಏಷ್ಯಾದಲ್ಲಿ ವಿನಾಶಕಾರಿ ಮಾರ್ಗ ಅನುಸರಿಸಿದ್ದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಲೇಖನದಲ್ಲಿ ಟೀಕಿಸಿದ್ದಾರೆ.
ಗಾಜಾದಲ್ಲಿನ ವಿನಾಶ ಮತ್ತು ಈಗ ಇರಾನ್ ವಿರುದ್ಧದ ಅಪ್ರಚೋದಿತ ದಾಳಿ ಬಗ್ಗೆ ಭಾರತದ ಮೌನವು ನಮ್ಮ ನೈತಿಕ ಮತ್ತು ರಾಜತಾಂತ್ರಿಕ ಸಂಪ್ರದಾಯಗಳಿಂದ ಗೊಂದಲದ ದೂರಸರಿಯುವಿಕೆಯನ್ನು ತೋರಿಸುತ್ತದೆ. ಇದು ಕೇವಲ ಧ್ವನಿಯ ನಷ್ಟವಲ್ಲ, ಮೌಲ್ಯಗಳ ಶರಣಾಗತಿಯನ್ನೂ ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ದಿ ಹಿಂದೂ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ವಿವರಿಸಿದ್ದಾರೆ.
ಕಾಲ ಇನ್ನೂ ಮಿಂಚಿಲ್ಲ, ಭಾರತವು ಸ್ಪಷ್ಟವಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಮಾತುಕತೆಗೆ ಮರಳಲು ಲಭ್ಯವಿರುವ ಪ್ರತಿಯೊಂದು ರಾಜತಾಂತ್ರಿಕ ಮಾರ್ಗವನ್ನು ಬಳಸಬೇಕು ಎಂದು ಹೇಳಿದರು.
ಈ ಮಾನವೀಯ ದುರಂತದ ಸಂದರ್ಭದಲ್ಲಿ, ನರೇಂದ್ರ ಮೋದಿ ಸರ್ಕಾರವು ಶಾಂತಿಯುತ ಎರಡು ರಾಷ್ಟ್ರಗಳ ನಡುವಿನ ಪರಿಹಾರಕ್ಕೆ ಭಾರತದ ದೀರ್ಘಕಾಲೀನ ಮತ್ತು ತತ್ವಬದ್ಧ ಬದ್ಧತೆಯನ್ನು ಕೈಬಿಟ್ಟಿದೆ, ಇದು ಪರಸ್ಪರ ಭದ್ರತೆ ಮತ್ತು ಘನತೆಯಲ್ಲಿ ಇಸ್ರೇಲ್‌ನೊಂದಿಗೆ ಪಕ್ಕದಲ್ಲಿ ವಾಸಿಸುವ ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ತೀನ್ ನ್ನು ಕಲ್ಪಿಸುತ್ತದೆ ಎಂದು ಹೇಳಿದರು.
Advertisement