ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಪೋಸ್ಟ್: BJP ವಿರುದ್ಧ ಪ್ರತಿಭಟನೆ; 'ಕೈ' ಕಾರ್ಯಕರ್ತರು ಪೊಲೀಸರ ವಶಕ್ಕೆ

ಬಿಜೆಪಿಯಲ್ಲಿ ಏನೋ ಸಮಸ್ಯೆ ಇದೆ. ತುರ್ತು ಪರಿಸ್ಥಿತಿ ಘೋಷಣೆಯಾದ ನಂತರ ಇಡೀ ದೇಶ ಇಂದಿರಾ ಗಾಂಧಿಗೆ ಬೆಂಬಲ ನೀಡಿತ್ತು. ಇಂದಿರಾ ಗಾಂಧಿ 1980 ರಲ್ಲಿ ದೇಶವನ್ನು ಆಳಿದರು.
Congress protest
ಕಾಂಗ್ರೆಸ್ ಪ್ರತಿಭಟನೆ
Updated on

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಿಳಿದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಕಾರ್ಯಕರ್ತು ಇಂದು ಬೆಳಿಗ್ಗೆ ಬಿಜೆಪಿ ಕಚೇರಿಯ ಬಳಿ ಪ್ರತಿಭಟನೆಗಿಳಿದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ, ಭಾರತದಲ್ಲಿನ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕುರಿತು ಗ್ರಾಫಿಕ್ಸ್ ವಿಡಿಯೋವೊಂದನ್ನು ಹಂಚಿಕೊಂಡಿತ್ತು.

ಈ ವಿಡಿಯೋ ಸಂಬಂಧ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ .ಮನೋಹರ್ ಅವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಇಂದಿರಾ ಗಾಂಧಿ ಬಗ್ಗೆ ಹಾಕಿರುವ ಅವಹೇಳನಕಾರಿ ಪೋಸ್ಟ್ ಸಮಾಜದಲ್ಲಿ ಗಲಭೆಯುಂಟಾಗಿ, ಧರ್ಮಗಳ ಮಧ್ಯೆ ವೈರತ್ವವನ್ನುಂಟು ಮಾಡುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬುಧವಾರ ಮೊಬೈಲ್‍ನಲ್ಲಿ ಎಕ್ಸ್ ಖಾತೆಯನ್ನು ವೀಕ್ಷಿಸುತ್ತಿದ್ದಾಗ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಅಧಿಕೃತ ಎಕ್ಸ್ ಖಾತೆ @BJP4Karnataka ಯಲ್ಲಿ ಸಂಜೆ 3:54ಗಂಟೆಗೆ ಇಂದಿರಾ ಇಂಡಿಯಾ ಇಂದಿರಾ ಎಂದು ಬರೆದು, 0.38 ನಿಮಿಷಗಳ ವಿಡಿಯೋವನ್ನು ಅಪ್‍ಲೋಡ್ ಮಾಡಿ, ಸದರಿ ವಿಡಿಯೋದಲ್ಲಿ ಭಾರತದ ತುರ್ತು ಪರಿಸ್ಥಿತಿ ಸಮಯಕ್ಕೆ ಸಂಬಂಧಿಸಿದ್ದಾಗಿದ್ದು, ಸದರಿ ವಿಡಿಯೋದಲ್ಲಿ ಇಂದಿರಾಗಾಂಧಿಯವರ ಫೋಟೋವನ್ನು ಹಿಟ್ಲರ್ ರೀತಿ ಗ್ರಾಫಿಕ್ಸ್ ಮಾಡಲಾಗಿದೆ.

ಮಾಜಿ ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ ಸಮಾಜದಲ್ಲಿ ಧರ್ಮಗಳ ಮದ್ಯೆ ವೈರತ್ವವನ್ನುಂಟು ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯ ಬಿಜೆಪಿ ಎಕ್ಸ್ ಖಾತೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress protest
ಇಂದಿರಾ ಗಾಂಧಿ 'ಹಿಟ್ಲರ್': ಸೋಶಿಯಲ್ ಮೀಡಿಯಾ ಪೋಸ್ಟ್; ರಾಜ್ಯ ಬಿಜೆಪಿ ವಿರುದ್ಧ ಕೇಸ್ ದಾಖಲು!

ಬಿಜೆಪಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಕೆಲವು ದೂರುಗಳ ಆಧಾರದ ಮೇಲೆ ಅಥವಾ ಜನರಲ್ಲಿ ದ್ವೇಷವನ್ನು ಉಂಟುಮಾಡುವ ಕೆಲವು ವಿಷಯಗಳಿದ್ದರೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ. ಅನೇಕ ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಾಯಕನನ್ನು ಯಾರಾದರೂ ದೂಷಿಸಲು ಪ್ರಯತ್ನಿಸಿದರೆ ಮತ್ತು ಆ ಸಮಯದಲ್ಲಿನ ಸಕಾರಾತ್ಮಕ ಬೆಳವಣಿಗೆಯನ್ನು ಕೆಲವರು ಆಕ್ಷೇಪಿಸದರೆ, ಜನರು ವಿರೋಧಿಸುತ್ತಾರೆಂದು ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಏನೋ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ತುರ್ತು ಪರಿಸ್ಥಿತಿ ಘೋಷಣೆಯಾದ ನಂತರ ಇಡೀ ದೇಶ ಇಂದಿರಾ ಗಾಂಧಿಗೆ ಬೆಂಬಲ ನೀಡಿತ್ತು. ಇಂದಿರಾ ಗಾಂಧಿ 1980 ರಲ್ಲಿ ದೇಶವನ್ನು ಆಳಿದರು. ಜನತಾದಳ ಅಥವಾ ಇತರ ಯಾವುದೇ ಪಕ್ಷ ತಮ್ಮ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಲು ಸಾಧ್ಯವಾಗಲಿಲ್ಲ. ಅವರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಈಗ, ಪ್ರಚಾರಕ್ಕಾಗಿ, ಅವರ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com