ಹುಲಿ ರಕ್ಷಣೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತನ್ನಿ: ರಾಜ್ಯ ಸರ್ಕಾರಕ್ಕೆ ಬಿ.ವೈ ವಿಜಯೇಂದ್ರ ಒತ್ತಾಯ

ಹುಲಿಗಳು ಸಾವಿಗೀಡಾದ ಸ್ಥಳದ ಬಳಿಯೇ ಹಸುವಿನ ಮೃತದೇಹ ಪತ್ತೆಯಾಗಿದ್ದು, ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BY Vijayendra
ಬಿವೈ ವಿಜಯೇಂದ್ರ
Updated on

ಬೆಂಗಳೂರು: ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯದಲ್ಲಿ ಹುಲಿ ಮತ್ತು ಅದರ ನಾಲ್ಕು ಮರಿಗಳು ಸಾವಿಗೀಡಾಗಿದ್ದು, ತನಿಖಾ ತಂಡ ಆದಷ್ಟು ಬೇಗ ಸತ್ಯವನ್ನು ಬಹಿರಂಗಪಡಿಸಬೇಕು ಮತ್ತು ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಒತ್ತಾಯಿಸಿದ್ದಾರೆ.

'ಮಲೆ ಮಹದೇಶ್ವರರ ವಾಹನವೆಂದು ಹುಲಿಯನ್ನು ಪೂಜಿಸುವ ಬೆಟ್ಟದ ಸನ್ನಿಧಿಯಲ್ಲೇ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಆಘಾತಕಾರಿ, ಅಮಾನವೀಯ ಹಾಗೂ ಭಕ್ತರ ಮನಸ್ಸಿಗೆ ಘಾಸಿ ತರಿಸಿರುವ ಘಟನೆಯಾಗಿದೆ. ಹುಲಿಗಳ ಸಾವಿಗೆ ವಿಷ ಪ್ರಾಶನವಾಗಿದ್ದರೆ ಅದು ಅತ್ಯಂತ ಹೇಯ ಹಾಗೂ ಖಂಡನೀಯ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ರಚಿಸಿರುವ ತನಿಖಾ ತಂಡ ಶೀಘ್ರ ಸತ್ಯಾಂಶವನ್ನು ಬಯಲಿಗೆಳೆದು ದುಷ್ಕರ್ಮಿಗಳನ್ನು ಬಂಧಿಸಲಿ ಎಂದು ಒತ್ತಾಯಿಸುವೆ' ಎಂದು ಅವರು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹುಲಿಗಳು ಸಾವಿಗೀಡಾದ ಸ್ಥಳದ ಬಳಿಯೇ ಹಸುವಿನ ಮೃತದೇಹ ಪತ್ತೆಯಾಗಿದ್ದು, ಹುಲಿ ಮತ್ತು ಅದರ ನಾಲ್ಕು ಮರಿಗಳ ಸಾವಿಗೆ ವಿಷಪ್ರಾಶನ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಬೇಟೆಯಾಡಿದ ನಂತರ ಹಸುವಿನ ಕಳೇಬರಕ್ಕೆ ವಿಷ ಹಾಕಲಾಯಿತೇ ಅಥವಾ ವಿಷಪ್ರಾಶನವಾದ ಹಸುವನ್ನು ಕಾಡಿನೊಳಗೆ ಇರಿಸಲಾಗಿತ್ತೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಹುಲಿಗಳ ಹಾಗೂ ಹಸುವಿನ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಹುಲಿಗಳ ದೇಹ ಸೇರಿರುವ ವಿಷ ಯಾವುದು, ಪ್ರಮಾಣ ಎಷ್ಟು ಎಂಬ ಮಾಹಿತಿ ವರದಿ ಬಂದ ಬಳಿಕತಿಳಿಯಲಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

BY Vijayendra
ಮಲೈ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಸಾವು: ಹಸುವಿನ ಮೃತದೇಹಕ್ಕೆ ವಿಷಪ್ರಾಶನದ ಶಂಕೆ?

'ಮನು ಕುಲದ ಅಸ್ತಿತ್ವ ವನ್ಯಜೀವಿ ಪ್ರಾಣಿಗಳ ಸಂರಕ್ಷಣೆಯಲ್ಲಿದೆ' ಎಂಬ ಅರಿವು ಇನ್ನಷ್ಟು ವ್ಯಾಪಿಸಬೇಕಿದೆ. ಕಾಡಂಚಿನಲ್ಲಿ ವಾಸಿಸುವ ಜನರಲ್ಲಿ ಅರಣ್ಯ ಹಾಗೂ ವನ್ಯ ಜೀವಿಗಳ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕಿದೆ. ಪ್ರತಿಯೊಂದು ವನ್ಯಜೀವಿಯೂ ಮನುಷ್ಯ ಸಮಾಜದ ಸ್ನೇಹಜೀವಿ ಹಾಗೂ ದೇಶದ ಸಂಪತ್ತು ಎಂಬ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಾಂದೋಲನವನ್ನು ಸರ್ಕಾರ ಆರಂಭಿಸಲಿ' ಎಂದಿದ್ದಾರೆ.

'ಹುಲಿ ಸಂತತಿ ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶದ ಹೆಮ್ಮೆಯ ಹೆಗ್ಗುರುತಾಗಿದೆ. ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಸರ್ಕಾರ ಹುಲಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದ ಯೋಜನೆಯನ್ನು ಬಳಸಿಕೊಂಡು ವಿಶೇಷ ಆದ್ಯತೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಲ್ಲದೇ ಹುಲಿಗಳ ಸಂರಕ್ಷಣೆ ಹಾಗೂ ಸುರಕ್ಷತೆಯತ್ತ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸುತ್ತೇನೆ' ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಿಡುಗಡೆ ಮಾಡಿದ ವರದಿ ಪ್ರಕಾರ, ಕರ್ನಾಟಕವು ದೇಶದಲ್ಲಿ ಎರಡನೇ ಅತಿ ಹೆಚ್ಚು ಹುಲಿ ಜನಸಂಖ್ಯೆಯನ್ನು ಹೊಂದಿದೆ. 563 ಹುಲಿಗಳು ಇಲ್ಲಿವೆ. ಮಧ್ಯಪ್ರದೇಶ 785 ಹುಲಿಗಳನ್ನು ಹೊಂದಿದ್ದು, ಮೊದಲನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com