
ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣ ಪಕ್ಕದಲ್ಲಿ ಗುರುವಾರ ದೊಡ್ಡ ಹೈಡ್ರಾಮಾ ನಡೆದಿದ್ದು ವ್ಯಕ್ತಿಯೋರ್ವ ಹಲಸಿನ ಹಣ್ಣು ಕೀಳಲು ಹೋಗಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದುಕೊಂಡ ಘಟನೆ ವರದಿಯಾಗಿದೆ.
ಹೌದು... ವ್ಯಕ್ತಿಯೊಬ್ಬ ಹಲಸಿನ ಹಣ್ಣು ಕದಿಯಲು ಬಂದು ಪೇಚಿಗೆ ಸಿಲುಕಿ ನಂತರ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ.
ನಗರ ಪೊಲೀಸ್ ಕಚೇರಿ ಸಮೀಪದ ಅಲಿ ಅಸ್ಗರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ತಮಿಳುನಾಡಿನ ಹೊಸೂರು ಮೂಲದ ಶಕ್ತಿವೇಲು(37) ಗಾಯ ಗೊಂಡ ವ್ಯಕ್ತಿಯಾಗಿದ್ದಾನೆ. ಶಕ್ತಿವೇಲು ಪಾನಮತ್ತನಾಗಿದ್ದ ಎಂದು ಹೇಳಲಾಗಿದೆ.
ಆಗಿದ್ದೇನು?
ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಅಲಿ ಆಸ್ಕರ್ ರಸ್ತೆಯಲ್ಲಿರುವ ಎಂಬಸಿ ಅಪಾರ್ಟ್‌ಮೆಂಟ್ ಸಂಕೀರ್ಣದೊಳಗಿರುವ ಹಲಸಿನ ಮರದಲ್ಲಿ ಹಣ್ಣುಗಳಿದ್ದವು. ಇದನ್ನು ನೋಡಿದ ತಮಿಳುನಾಡಿನ ಶಕ್ತಿವೇಲು ಎಂಬ ವ್ಯಕ್ತಿ ಹಲಸಿನ ಹಣ್ಣು ಕದಿಯಲು ಸುಮಾರು 50 ಅಡಿ ಇರುವ ಎತ್ತರದ ಮರವೇರಿದ್ದಾನೆ. ನೋಡ ನೋಡುತ್ತಲೇ ಶಕ್ತಿವೇಲು ಮರವನ್ನು ಹತ್ತಿದ್ದು, ಬಳಿಕ ಗ್ರಿಪ್ ಸಿಗದೇ ಅಲ್ಲಿಯೇ ಒದ್ದಾಡಿದ್ದಾನೆ. ಸರಿಯಾಗಿ ಗ್ರಿಪ್ ಸಿಗದೆ ಮರದ ರೆಂಬೆ ಹಿಡಿದು ನೇತಾಡಿದ್ದಾನೆ.
ವ್ಯಕ್ತಿ ಮರ ಹತ್ತಿರುವುದನ್ನು ಗಮನಿಸಿದ ಸ್ಥಳೀಯರು ಇದನ್ನು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ ಬಳಿಕ ಸ್ಥಳೀಯರು ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದೌಡಾಯಿಸಿದ ಪೊಲೀಸ್ ಸಿಬ್ಬಂದಿ ಆರಂಭದಲ್ಲಿ ಆತನನ್ನು ಕೆಳಗೆ ಇಳಿಯುವಂತೆ ಕೂಗಿದರು. ಆದರೆ ಆತನಿಂದ ಕೆಳಗೆ ಇಳಿಯಲು ಸಾಧ್ಯವಾಗಿಲ್ಲ. ನೋಡ ನೋಡುತ್ತಲೇ ಆತ ಗ್ರಿಪ್ ಕಳೆದುಕೊಂಡು ಮರವನ್ನು ಹಿಡಿದು ನೇತಾಡಿದ್ದಾನೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತ ನೇತಾಡುತ್ತಿದ್ದ ಮರದ ಕೆಳಗೆ ಟಾರ್ಪಲ್ ಮಾದರಿಯ ವಸ್ತು ಹಿಡಿದು ರಕ್ಷಿಸಲು ಯತ್ನಿಸಿದ್ದು, ಕೊನೆಗೂ ಆತ ಕೆಳಗೆ ಬಿದ್ದು ಗಾಯಗೊಂಡಿದ್ದು ಆತನನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆತನ ಬೆನ್ನಿಗೆ ಪೆಟ್ಟು ಬಿದ್ದಿದ್ದು ಆತನ ಬೆನ್ನು ಮೂಳೆ ಮುರಿತವಾಗಿದೆ. ಆದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಸ್ತುತ ಆತನನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.
Advertisement