
ಬೆಂಗಳೂರು: ಆರ್'ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿದ ಪ್ರಕರಣಕ್ಕೆ ಸಬಂಧಿಸಿದಂತೆ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಮತ್ತು ನಗರದ ಮಾಡಿ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಗುರುವಾರ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ಬಿ.ದಯಾನಂದ್ 3 ವಾರಗಳ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರನ್ನು ವಿಚಾರಣೆ ನಡೆಸಲಾಗಿದೆ.
ಕಾರ್ಯಕ್ರಮ ಆಯೋಜನೆಗೆ ಕೆಎಸ್ ಸಿಎ ಸೇರಿ ಸಂಬಂಧಿಸಿದ ಸಂಸ್ಥೆಗಳು ಅನುಮತಿ ಕೋರಿರುವುದು, ಭದ್ರತಾ ಕ್ರಮಗಳು, ಸಾವು ನೋವಿನ ಮಾಹಿತಿ ಸೇರಿ ಇನ್ನಿತರ ವಿಚಾರಗಳ ಬಗ್ಗೆ ವಿಚಾರಣಾಧಿಕಾರಿ ಹೇಳಿಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ಆರ್‌ಸಿಬಿ ಆಡಳಿತ ಮಂಡಳಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ) ಮತ್ತು ಡಿಎನ್‌ಎ, ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಕೋರಿದ ಅನುಮತಿಗಳು ಹಾಗೂ ಪೊಲೀಸ್ ಇಲಾಖೆಯೊಳಗಿನ ಮತ್ತು ರಾಜ್ಯ ಸರ್ಕಾರದೊಂದಿಗಿನ ಆಂತರಿಕ ಮಾತುಕತೆ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ, ಕಾಲ್ತುಳಿತ ಘಟನೆಗೆ ಸಂಬಂಧಿಸಿದ ಯಾವುದೇ ಮಾಹಿತಿಯಿದ್ದರೆ ಮುಂದೆ ಬರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಪ್ರತ್ಯಕ್ಷದರ್ಶಿಗಳು ಮತ್ತು ಸಾರ್ವಜನಿಕರನ್ನು ಕೋರಿದ್ದಾರೆ.
ಸಂಬಂಧಿತ ವಿವರಗಳು, ಛಾಯಾಚಿತ್ರಗಳು, ವೀಡಿಯೊಗಳು ಅಥವಾ ನೇರ ಹೇಳಿಕೆಗಳನ್ನು ಹೊಂದಿರುವ ಜನರು ಜೂನ್ 27 ರಂದು ಬೆಳಿಗ್ಗೆ 11 ಗಂಟೆಗೆ ಕೆಜಿ ರಸ್ತೆಯಲ್ಲಿರುವ ಡಿಸಿ ಕಚೇರಿಯಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಭಾಂಗಣದಲ್ಲಿ ಖುದ್ದಾಗಿ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಹೇಳಿಕೆ ನೀಡಲು ಮುಂದೆ ಬರುವವರು ತಮ್ಮ ಲಿಖಿತ ಅಫಿಡವಿಟ್‌ಗಳ ಎರಡು ಪ್ರಮಾಣೀಕೃತ ಪ್ರತಿಗಳನ್ನು ತರುವಂತೆ ಕೋರಲಾಗಿದೆ.
ತನಿಖೆಯಲ್ಲಿ ಸಾರ್ವಜನಿಕ ಸಹಕಾರದ ಮಹತ್ವವನ್ನು ಒತ್ತಿ ಅಧಿಕಾರಿಗಳು ಸಾರ್ವಜನಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡಿದ್ದಾರೆ.
ಮ್ಯಾಜಿಸ್ಟೀರಿಯಲ್ ತನಿಖಾ ವರದಿಯನ್ನು ಈ ವಾರದ ಅಂತ್ಯದೊಳಗೆ ಅಥವಾ ಮುಂದಿನ ವಾರದ ಆರಂಭದಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
Advertisement