
ಬೆಂಗಳೂರು: ರಾಜ್ಯ ಸರ್ಕಾರದ 21,799 ಪ್ರಕರಣಗಳು ಹೈಕೋರ್ಟ್ ನಲ್ಲಿ ಬಾಕಿಯಿದ್ದು, 5,016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ,ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯನಿರ್ವಹಣಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ನ್ಯಾಯಾಲಯಗಳಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ನಾವು ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಕೇಸ್‌ಗಳಲ್ಲಿ ಸಹ ಸರ್ಕಾರದ ಪರವಾಗಿ ಆದೇಶಗಳು ಬರುತ್ತಿಲ್ಲ. ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಹ ಸರ್ಕಾರಕ್ಕೆ ಮುಜುಗುರವಾಗುವಂತಹ ಬೆಳವಣಿಗೆಗಳು ಆಗಿವೆ. ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರವುಂಟಾಗುವ ಪರಿಸ್ಥಿತಿ ಬರಬಾರದು. ಹಾಗಾಗಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದಲ್ಲಿ ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಯೊಂದು ಪ್ರಕರಣಗಳನ್ನು ಸವಾಲಿನಿಂದ ಸ್ವೀಕರಿಸಿ, ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿದೆ. ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು. ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರವನ್ನು ನಿಗದಿಪಡಿಸಬೇಕು ಎಂದು ಸೂಚಿಸಿದರು.
ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
Advertisement