ಬಿರು ಬಿಸಿಲಿಗೆ ತರಗುಟ್ಟಿದ ಉದ್ಯಾನನಗರಿ ಜನತೆ (ಸಂಗ್ರಹ ಚಿತ್ರ)
ಬಿರು ಬಿಸಿಲಿಗೆ ತರಗುಟ್ಟಿದ ಉದ್ಯಾನನಗರಿ ಜನತೆ (ಸಂಗ್ರಹ ಚಿತ್ರ)

ರಾಜ್ಯದಲ್ಲಿ ಬಿರು ಬಿಸಿಲು: ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರ ಹೋಗುವುದು ತಪ್ಪಿಸಿ; ಆರೋಗ್ಯ ಇಲಾಖೆ ಸಲಹೆ

ಈ ಅವಧಿಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಮತ್ತು ಉಷ್ಣತೆಯ ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
Published on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಬಿಸಿಲ ಝಳ ತೀವ್ರವಾಗಿದೆ. ಮಾರ್ಚ್–ಮೇ ಅವಧಿಯಲ್ಲಿ ಕೆಲ ದಿನಗಳುಬಿಸಿಲು, ಒಣ ಹವೆ ತೀವ್ರಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳು, ಕಾರ್ಮಿಕರು ಸೇರಿ ವಿವಿಧ ವರ್ಗದವರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಈ ಬಗ್ಗೆ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರ ಹೋಗುವುದು ತಪ್ಪಿಸುವಂತೆ ಸಲಹೆ ನೀಡಿದೆ.

ಈ ಅವಧಿಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಮತ್ತು ಉಷ್ಣತೆಯ ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಜ್ವರ, ತಲೆನೋವು, ಊತಗಳು, ಸ್ನಾಯು ಸೆಳೆತ, ಪ್ರಜ್ಞೆ ತಪ್ಪುವಿಕೆ, ಸುಸ್ತು, ಪಾರ್ಶ್ವವಾಯು ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೀವ್ರ ಉಷ್ಣತೆಯಿಂದ ಹೃದ್ರೋಗ, ಉಸಿರಾಟ, ಮೂತ್ರಪಿಂಡದ ಸಮಸ್ಯೆಯೂ ಅಧಿಕವಾಗುತ್ತದೆ.

ಬಿಸಿಲಿನ ಶಾಖದಿಂದ ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿ, ಮೂತ್ರ ವಿಸರ್ಜನೆ ಸಮಸ್ಯೆ, ಏರುಗತಿ ಉಸಿರಾಟ ಸೇರಿ ವಿವಿಧ ಸಮಸ್ಯೆಗಳು ಸಹ ಕಾಣಿಸಿಕೊಳ್ಳಲಿವೆ. ತಾಪಾಘಾತವು ವೈದ್ಯಕೀಯ ತುರ್ತು ಸಂದರ್ಭವಾಗಿದೆ. ದೇಹದ ಉಷ್ಣಾಂಶ ಹೆಚ್ಚಳ, ಪ್ರಜ್ಞೆ ತಪ್ಪುವುದು, ಬೆವರುವಿಕೆ ಸಮಸ್ಯೆಗಳು ಕಾಣಿಸಿದಲ್ಲಿ ತಕ್ಷಣವೇ ಸಹಾಯವಾಣಿ 108 ಅಥವಾ 102ಕ್ಕೆ ಕರೆ ಮಾಡಬಹುದು ಎಂದು ಸೂಚಿಸಿದೆ.

ಮಾರ್ಗಸೂಚಿಯಲ್ಲೇನಿದೆ?

  • ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ. ಪ್ರಯಾಣ ಸಮಯದಲ್ಲೂ ಕುಡಿಯುವ ನೀರು ಜೊತೆಗೆ ಇರಬೇಕು. ಮೌಖಿಕ ಮನರ್ಜಲೀಕರಣ ದ್ರಾವಣ (ORS), ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಜ್ಯೂಸ್‌, ಮಜ್ಜಿಗೆ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬಹುದಾಗಿದೆ.

  • ಋತುಮಾನದಲ್ಲಿ ಲಭ್ಯವಿರುವ, ಹೆಚ್ಚು ನೀರಿನಂಶ ಹೊಂದಿರುವ ಹಣ್ಣು, ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಲೆಟ್ಯೂಸ್, ಎಳನೀರು ಹೆಚ್ಚಾಗಿ ಸೇವಿಸಿ. ಹೆಚ್ಚು ಬಿಸಿಲು ಬೀಳದಂತೆ ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಹಾಗಾಗಿ ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ.

  • ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್‌, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ. ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ, ಶೂಗಳನ್ನು ಧರಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

  • ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಬೆಳಿಗ್ಗೆ 11 ಗಂಟೆಯ ಮೊದಲು ಅಥವಾ ಸಂಜೆ 4 ಗಂಟೆಯ ನಂತರಕ್ಕೆ ನಿಗದಿಪಡಿಸಿ. ಸಭೆ, ಸಮಾರಂಭಗಳಿದ್ದಲ್ಲಿ ಬಿಸಿಲಿನಿಂದ ರಕ್ಷಣೆಗೆ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.

  • ಬಿಸಿಲಿಗೆ ನವಜಾತ ಶಿಶುಗಳು, ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಹೃದ್ರೋಗ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಹೆಚ್ಚು ಆಪಾಯ ಎದುರಿಸುವ ಸಾಧ್ಯತೆಗಳಿವೆ.

  • ಅಪಾಯದಿಂದ ದೂರ ಉಳಿಯಲು ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಸಿದ್ಧಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲುಗಳನ್ನು ತೆರೆದಿಡಿ. ಮದ್ಯಪಾನ, ಚಹಾ, ಕಾಫಿ, ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶ ಹೊಂದಿದ ಪಾನೀಯಗಳಿಂದ ದೂರವಿರಬೇಕು. ಹೆಚ್ಚು ಪ್ರೋಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸದಿರಿ.

  • ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳ ಒಳಗೆ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅಪಾಯಕಾರಿ ಆಗಬಹುದು.

ಬಿರು ಬಿಸಿಲಿಗೆ ತರಗುಟ್ಟಿದ ಉದ್ಯಾನನಗರಿ ಜನತೆ (ಸಂಗ್ರಹ ಚಿತ್ರ)
ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ರಣ ಬಿಸಿಲು: ನೀರಿನ ಬವಣೆ ಎದುರಿಸಲು BWSSB ಸಜ್ಜು

ಹೀಟ್ ಸ್ಟ್ರೋಕ್ ಆದರೆ ಏನು ಮಾಡಬೇಕು...?

  • ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ 108/102 ಗೆ ಕರೆ ಮಾಡಿ.

  • ವ್ಯಕ್ತಿಯನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸಿ. ಅವರ ಚರ್ಮಕ್ಕೆ ತಣ್ಣೀರು ಹಚ್ಚಿ, ಫ್ಯಾನ್ ಹಾಕಿ. ಲಕ್ಷಣಗಳು ಉಲ್ಬಣಗೊಳ್ಳುವವರೆಗೆ ಕಾಯದಿರಿ. ವೈದ್ಯಕೀಯ ನೆರವು ಪಡೆಯಿತು.

  • ಈ ನಡುವೆ ಉಷ್ಣಾಂಶ ಕುರಿತು ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದ್ದು, ಕಾರವಾರದಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಾರ್ಚ್ 7 ರವರೆಗೆ ರಾಜ್ಯದ ಕೆಲವು ಭಾಗಗಳಲ್ಲಿ ಒಣ ಹವಾಮಾನ ಇರುವ ಸಾಧ್ಯತೆಯಿದೆ ಎಂದು ಹೇಳಿದೆ.

ಬೆಂಗಳೂರು ನಗರ - 32.1 ಡಿಗ್ರಿ ಸೆಲ್ಸಿಯಸ್

ಮಂಗಳೂರು - 36.3 ಡಿಗ್ರಿ ಸೆಲ್ಸಿಯಸ್

ಕಲಬುರಗಿ - 37.4 ಡಿಗ್ರಿ ಸೆಲ್ಸಿಯಸ್

ಕಾರವಾರ - 38.2 ಡಿಗ್ರಿ ಸೆಲ್ಸಿಯಸ್

ಚಿತ್ರದುರ್ಗ - 34.1 ಡಿಗ್ರಿ ಸೆಲ್ಸಿಯಸ್

ಹಾವೇರಿ, ಗದಗ - 35 ಡಿಗ್ರಿ ಸೆಲ್ಸಿಯಸ್

ಚಾಮರಾಜನಗರ - 36.3 ಡಿಗ್ರಿ ಸೆಲ್ಸಿಯಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com