
ಬೆಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂಬ ಸರ್ಕಾರದ ನಿಲುವು ಕುರಿತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಎಂಬಿ. ಪಾಟೀಲ್ ಅವರು ಉತ್ತರ ನೀಡಿದರು.
ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರಿಂದಾಗಿ ಆ ಸಂಸ್ಥೆಯೇ ಭೂಸ್ವಾಧೀನ ಮಾಡಿಕೊಂಡು, ರನ್ ವೇ ನಿರ್ಮಿಸಬೇಕು. ಬೇಕಾದಲ್ಲಿ ರಾಜ್ಯ ಸರಕಾರ ಆರ್ಥಿಕ ನೆರವು ಹೊರತುಪಡಿಸಿ ಉಳಿದ ನೆರವು ನೀಡಲಿದೆ ಎಂದು ಹೇಳಿದರು.
ರಾಜ್ಯವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದರೂ, ಅವುಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಹಸ್ತಾಂತರಿಸಬೇಕಾಗಿರುವುದರಿಂದ, ಕೇಂದ್ರದ ವಿಮಾನ ನಿಲ್ದಾಣಗಳ ಹಣಗಳಿಸುವ ಯೋಜನೆಯ ವಿರುದ್ಧ ರಾಜ್ಯ ಪ್ರತಿಭಟಿಸುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ವಿಮಾನನಿಲ್ದಾಣವನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ಮಾತ್ರ ನೀಡಲಾಗಿದೆ. ಹೀಗಾಗಿ ರಾಜ್ಯ ಸರಕಾರವೂ ರನ್ ವೇ ನಿರ್ಮಿಸಬಹುದು. ಇಲ್ಲವಾದರೆ ಅಗತ್ಯ ಭೂಮಿ ಒದಗಿಸಬೇಕು. ಇದು ನೂರಾರು ಜನರ ಜೀವನದ ಪ್ರಶ್ನೆ. ಹೀಗಾಗಿ ರಾಜ್ಯ ಸರಕಾರ ನಿಲುವು ಬದಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement