ರಾಜ್ಯ ಬಜೆಟ್ 2025: ಬೆಂಗಳೂರಿಗೆ ಸಿಎಂ ಬಂಪರ್ ಗಿಫ್ಟ್, 40 ಸಾವಿರ ಕೋಟಿ ರೂ ವೆಚ್ಚದ ಟನಲ್‌ ಯೋಜನೆ ಘೋಷಣೆ

ನಗರದಲ್ಲಿ ಸಂಚಾರ ದಟ್ಟಣೆ ತಲೆದೋರಿರುವ ಹಿನ್ನೆಲೆಯಲ್ಲಿ ಟನಲ್‌ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.
vidhana soudha and vikasa soudha
ವಿಧಾನಸೌಧ ಮತ್ತು ವಿಕಾಸ ಸೌಧ
Updated on

ಬೆಂಗಳೂರು: ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ತಲೆದೋರಿರುವ ಹಿನ್ನೆಲೆಯಲ್ಲಿ ಟನಲ್‌ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ 19 ಸಾವಿರ ಕೋಟಿ ರೂ. ಗ್ಯಾರಂಟಿಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಬೆಂಗಳೂರಿಗೆ ಮುಖ್ಯಮಂತ್ರಿಗಳ ಘೋಷಣೆಗಳು ಇಂತಿವೆ...

  • ರಾಜ್ಯದ ಆರ್ಥಿಕತೆಗೆ ಬಹುಮುಖ್ಯ ಕೊಡುಗೆ ನೀಡುವ ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರವು ಆದ್ಯತೆ ನೀಡುತ್ತದೆ. ಪ್ರತಿ ವರ್ಷ ನೀಡುತ್ತಿರುವ 3,000 ಕೋಟಿ ರೂ. ಅನುದಾನವನ್ನು ಪ್ರಸಕ್ತ ವರ್ಷದಲ್ಲಿ 7,000 ಕೋಟಿ ರೂ. ಗೆ ಹೆಚ್ಚಿಸಲಾಗುವುದು. ಈ ಅನುದಾನವನ್ನು ಬಳಸಿ ಬೃಹತ್‌ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಲು ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ (Special Purpose Vehicle) ಸ್ಥಾಪಿಸಲಾಗುವುದು.

  • ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೈಗೊಂಡಿರುವ ವಿವಿಧ ಸುಧಾರಣಾ ಕ್ರಮಗಳಿಂದ ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳ ಸಾಧಿಸಲಾಗಿದೆ. ತಂತ್ರಜ್ಞಾನ ಬಳಸಿ ಆನ್‌ಲೈನ್ ಮೂಲಕ ಇ-ಖಾತಾ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ರಾಜಸ್ವ ಶೇಖರಣೆಯನ್ನು ಹೆಚ್ಚು ಮಾಡುವುದರೊಂದಿಗೆ ನಾಗರೀಕ ಸೇವೆಗಳನ್ನು ಸರಳವಾಗಿ ನೀಡಲು ಸಾಧ್ಯವಾಗಿದೆ. ಅಲ್ಲದೇ ಪಾಲಿಕೆಯ ಸ್ವಂತ ಆಸ್ತಿಗಳ ಉತ್ತಮ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸಹಕಾರಿಯಾಗುವಂತೆ ಬಿಬಿಎಂಪಿ (ಎಸ್ಟೇಟ್) ನಿಯಮಗಳು 2024 ಅನ್ನು ಅಧಿಸೂಚಿಸಲಾಗಿದೆ. ಈ ಎಲ್ಲಾ ಸುಧಾರಣಾ ಕ್ರಮಗಳಿಂದ 2024-25ನೇ ಸಾಲಿನಲ್ಲಿ ಈವರೆಗೂ 4,556 ಕೋಟಿ ರೂ. ಸಂಗ್ರಹಣೆ ಮಾಡಲಾಗಿದೆ. ಇದರೊಂದಿಗೆ, ಪಾಲಿಕೆಯ ಜಾಹೀರಾತು ಉಪ-ವಿಧಿಗಳು 2025 ರ ಅನುಷ್ಠಾನದಿಂದ ವರ್ಷಕ್ಕೆ 750 ಕೋಟಿ ರೂ. ಆದಾಯವನ್ನು ಅಂದಾಜಿಸಲಾಗಿದೆ.

  • ಬಿಬಿಎಂಪಿಗೆ ಅಂದಾಜು ಮೊತ್ತ 40,000 ಕೋಟಿ ರೂ. ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳನ್ನು (Tunnel) ಕೈಗೊಳ್ಳಲು ಅನುಕೂಲವಾಗುವಂತೆ 19,000 ಕೋಟಿ ರೂ. ಗ್ಯಾರಂಟಿಯನ್ನು ಸರ್ಕಾರದಿಂದ ಒದಗಿಸಲಾಗಿದೆ.

  • ವಾಹನ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರದ ಮುಖ್ಯ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ (signal-free) ನಿಟ್ಟಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

  • ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8,916 ಕೋಟಿ ರೂ. ವೆಚ್ಚದಲ್ಲಿ 40.50 ಕಿ.ಮೀ. ಉದ್ದದ Double Decker Flyover ರಸ್ತೆಯನ್ನು ನಿರ್ಮಿಸಲಾಗುವುದು.

  • ಕಾಲುವೆಯ ಬಫರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು.

  • ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಜಾಲವನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

  • ನಗರದಲ್ಲಿ 120 ಕಿ.ಮೀ. ಉದ್ದದ Flyover ಹಾಗೂ Grade Separator ಗಳನ್ನು ನಿರ್ಮಿಸಲಾಗುವುದು.

  • 'ಬ್ಯಾಂಡ್ ಬೆಂಗಳೂರು' ಯೋಜನೆಯಡಿ 2024-25 ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

  • ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು, 'ಬ್ಯಾಂಡ್ ಬೆಂಗಳೂರು' ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ.ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ'ಯನ್ನುಜಾರಿಗೊಳಿಸಲಾಗುವುದು.

  • ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಸರ್ಕಾರವು BBMP ಹಾಗೂ BWSSB ಗೆ 3,000 ಕೋಟಿ ರೂ. ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿರುತ್ತದೆ.

  • 2024-25ನೇ ಸಾಲಿನಲ್ಲಿ 5,550 ಕೋಟಿ ರೂ. ಮೊತ್ತದಲ್ಲಿ 775 MLD ಹೆಚ್ಚುವರಿ ನೀರಿನ ಸಾಮರ್ಥ್ಯವನ್ನು ಹೊಂದಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ 110 ಹಳ್ಳಿಗಳಲ್ಲಿರುವ 50 ಲಕ್ಷ ನಿವಾಸಿಗಳಿಗೆ ಜೀವಜಲ ದೊರಕಿಸಲಾಗಿದೆ.

  • BWSSB ವತಿಯಿಂದ ಎಸ್.ಟಿ.ಪಿ ಘಟಕಗಳ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗವನ್ನು ಪಡೆಯುವ ನಿಟ್ಟಿನಲ್ಲಿ PPP ಮಾದರಿಯಲ್ಲಿ ಯೋಜನೆಯನ್ನು ರೂಪಿಸಲಾಗುವುದು.

  • ನೆನೆಗುದಿಗೆ ಬಿದ್ದಿದ್ದ Peripheral Ring Road ಯೋಜನೆಯನ್ನು ಬೆಂಗಳೂರು ಬಿಸ್‌ನೆಸ್ ಕಾರಿಡಾರ್ ಎಂದು ರುನಾಮಕರಣಗೊಳಿಸಿ 73 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಹುಡೋ ಬ್ಯಾಂಕ್ ನೆರವಿನೊಂದಿಗೆ 27,000 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಪ್ರತ್ಯೇಕ ತಂಡಗಳನ್ನು ರಚಿಸಿ ಭೂಸ್ವಾದೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

  • 'ನಮ್ಮ ಮೆಟ್ರೋ' ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತಿದ್ದು, ಪ್ರಸ್ತುತ 68 ನಿಲ್ದಾಣಗಳನ್ನೊಳಗೊಂಡಂತೆ 79.65 ಕಿ.ಮೀ. ಮಾರ್ಗದ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.

  • ಮೆಟ್ರೋ ಜಾಲವನ್ನು ದೇವನಹಳ್ಳಿಯವರೆಗೆ ವಿಸ್ತರಿಸಲು ಯೋಜಿಸಲಾಗಿದೆ. ಕಾವೇರಿ ಹಂತ-6 ಅನುಷ್ಠಾನಕ್ಕಾಗಿ ವಿಸ್ಕೃತ ಯೋಜನಾ ವರದಿಯನ್ನು ತಯಾರಿಸಲಾಗುವುದು.

  • ಬಿಬಿಎಂಪಿ ವತಿಯಿಂದ ವಿಸ್ತ್ರತ 'ಬ್ಯಾಂಡ್ ಬೆಂಗಳೂರು ಹಸಿರು ಬೆಂಗಳೂರು' ಅಡಿಯಲ್ಲಿ 35 ಕೋಟಿ ರೂ. ವೆಚ್ಚದ 14 ಕೆರೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನರುಜ್ಜಿವನ ಕಾಮಗಾರಿಗಳನ್ನು 234 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.

  • ವಾಹನ ದಟ್ಟಣೆ ಇರುವ ರೈಲ್ವೇ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಬದಲಿಗೆ ರಸ್ತೆ ಮೇಲೇತುವೆ/ಕೆಳಸೇತುವೆ ನಿರ್ಮಿಸಲು ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 50 ಕೋಟಿ ರೂ. ಒದಗಿಸಲಾಗಿದೆ.

  • ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಗಳಡಿಯಲ್ಲಿ 70 ಕಿ.ಮೀ ರೈಲ್ವೆ ಲೈನ್ ಗಳನ್ನು ದ್ವಿಪಥೀಕರಣಗೊಳಿಸಲು ಒಟ್ಟಾರೆ 812 ಕೋಟಿ ರೂ. ಅಂದಾಜಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ವತಿಯಿಂದ 406 ಕೋಟಿ ರೂ. ಒದಗಿಸಲಾಗುತ್ತಿದೆ. ಸದರಿ ಎರಡು ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು.

  • ಬೆಂಗಳೂರು ಉಪನಗರ ರೈಲ್ವೇ ಯೋಜನೆಯನ್ನು 15,767 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 58 ರೈಲ್ವೇ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿರುತ್ತದೆ. ನಾಲ್ಕು ಕಾರಿಡಾರ್‌ಗಳನ್ನೊಳಗೊಂಡ ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‌ಗಳ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com