
ಬೆಂಗಳೂರು: ಇತ್ತೀಚೆಗೆ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಭಾರೀ ಪ್ರಮಾಣದಲ್ಲಿ ಭಾಷಾಂತರ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆಗ್ರಹಿಸಿದೆ.
ವಿಧಾನ ಪರಿಷತ್ ನಲ್ಲಿ ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿನ ದೋಷ ವಿಚಾರವನ್ನ ಪ್ರಸ್ತಾಪಿಸಿದ ಬಿಜೆಪಿ ಮತ್ತು ಜೆಡಿಎಸ್ ಎಂಎಲ್‌ಸಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಮರಪರೀಕ್ಷೆಯಲ್ಲಿ ಹಲವಾರು ದೋಷಗಳಾಗಿವೆ. ಅದನ್ನು ರದ್ದುಮಾಡಿ ಮತ್ತೇ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಕನ್ನಡ ಆಡಳಿತ ಭಾಷೆಯಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಅಭ್ಯಾಸವಾಗಬೇಕಿತ್ತು. ಆದರೆ ಇಲ್ಲಿ, ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು, ನಂತರ ಅದನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಇದಕ್ಕೆ ಆನ್‌ಲೈನ್ ಪರಿಕರಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ, ಕನ್ನಡದಲ್ಲಿ ಬರೆಯಲು ಆಯ್ಕೆ ಮಾಡಿಕೊಂಡವರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಭಾಷಾಂತರ ಆವಾಂತರದಿಂದಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗಿದೆ. ಒಂದು ಪ್ರಶ್ನೆ ಓದಲು 66 ಸೆಕೆಂಡ್ ಬೇಕಾಗುತ್ತದೆ. ಅದರಲ್ಲಿ ಕನ್ನಡ ಅರ್ಥವಾಗದೇ ಇದ್ದರೆ ಇಂಗ್ಲಿಷ್‌ನಲ್ಲಿ ಓದಿ ಅಥೆìçಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಕನ್ನಡದ ಅಭ್ಯರ್ಥಿಗಳು ಕಡಿಮೆ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ? ಹೀಗಾಗಿ, ಮರು ಪರೀಕ್ಷೆ ನಡೆಸಲೇಬೇಕು ಎಂದು ಆಗ್ರಹಿಸಿದರು.
ಕೆಪಿಎಸ್‌ಸಿಯಲ್ಲಿ ಹೆಚ್ಚು ಹಣ ಕೊಟ್ಟವರಿಗೆ ಹುದ್ದೆ ಸಿಗುತ್ತದೆ. ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ತಪ್ಪಿತಸ್ತರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರು ಮಾತನಾಡಿ, ಯುಪಿಎಸ್‌ಸಿ ಮಾದರಿಯನ್ನು ಕೆಪಿಎಸ್‌ಸಿ ಅನುಸರಿಸಬೇಕು. ಕೆಪಿಎಸ್ಸಿಯಲ್ಲಿ ತಾಳಿಭಾಗ್ಯ ಸ್ಕೀಂ, ಒಎಂಆರ್ ಶೀಟ್ ಡೀಲಿಂಗ್, ಮುಖ್ಯ ಪರೀಕ್ಷೆಗೆ ಒಂದು ಡೀಲ್, ಸಂದರ್ಶನಕ್ಕೆ ಒಂದು ಪ್ಯಾಕೇಜ್ ನಿಗದಿಯಾಗುತ್ತದೆ. ಎಸಿ, ತಹಶೀಲ್ದಾರ್ ಹುದ್ದೆಗಳು ಕೋಟಿ ರೂ. ಲೆಕ್ಕದಲ್ಲಿ ಮಾರಾಟವಾಗುತ್ತವೆ. ಕೆಪಿಎಸ್‌ಸಿ ಮುಚ್ಚಿ ಬಿಡಿ ಎಂದು ಒತ್ತಾಯಿಸಿದರು.
ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸೋಮವಾರ ಉತ್ತರ ನೀಡಲಿದ್ದಾರೆಂದು ಹೇಳಿದರು.
Advertisement